ಜನರ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ಮಾಧ್ಯಮಗಳಿಂದಾಗಬೇಕು : ನಿಸಾರ್ ಆಹಮದ್
ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಮಹೋತ್ಸವ

ಭಟ್ಕಳ, ಜ8 : ಮಾಧ್ಯಮಗಳು ಜನರ ಮನಸ್ಸುಗಳನ್ನು ಕೆಡಿಸುವಂತಹ ಕಾರ್ಯ ಮಾಡದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಹೋಗುವಂತಹ ಕೆಲಸ ಮಾಡಬೇಕಾಗಿದೆ ಎಂದು ನಿತ್ಯೋತ್ಸವ ಕವಿ ನಾಡೋಜ ಪ್ರೋ.ಕೆ.ಎಸ್.ನಿಸಾರ್ ಆಹ್ಮದ್ ಹೇಳಿದರು.
ಅವರು ಶನಿವಾರ ರಾತ್ರಿ ಸಾಗರ ರಸ್ತೆಯ ಶ್ರೀ ಗುರುಸುಧೀಂದ್ರ ಕಾಲೇಜ್ ಮೈದಾನಲ್ಲಿ ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷುಲ್ಲಕ ವಿಷಯಗಳನ್ನು ಮುಂದಿಟ್ಟುಕೊಂಡು ಗಂಟೆಗಟ್ಟಲೆ ಚರ್ಚಿಸುವ ಮಾಧ್ಯಮಗಳು ಜನರ ಸಮಸ್ಯೆಗಳನ್ನು ಮರೆಯುತ್ತಿವೆ. ಟಿಆರ್ ಪಿ ಯೊಂದೆ ಅವರ ಮುಖ್ಯ ಗುರಿಯಾಗಿದೆ ಎಂದ ಅವರು, ಪತ್ರಕರ್ತರಾದವರು ಪಕ್ಷಾತೀತವಾಗಿ ವರ್ತಿಸಬೇಕು. ಕನ್ನಡ ಭಾಷೆಯ ಮೇಲೆ ಹಿಡಿತವಿಲ್ಲ, ಕನ್ನಡ ವಿಷಯಜ್ಞಾನವಿಲ್ಲದ ಪತ್ರಕರ್ತರೇ ಇಂದು ಮಾಧ್ಯಮ ರಂಗದಲ್ಲಿ ತುಂಬಿಕೊಂಡಿದ್ದಾರೆ. ಇಂಗ್ಲಿಷ್ ಭಾಷೆಯನ್ನು ಕನ್ನಡಿಕರಿಸಿ ಕನ್ನಡವನ್ನು ಅಪಭೃಂಶವನ್ನಾಗಿ ಮಾಡುತ್ತಿದ್ದಾರೆ, ಸಂಸ್ಕೃತಭುವಿಷ್ಠಪದಗಳ ಬಳಕೆಯಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗದು. ಕೃತಕಭಾಷೆಯ ನಿರ್ಮಾಣದಿಂದಾಗಿ ಕನ್ನಡತನ ಹಾಳಾಗುತ್ತಿದೆ, ಇದು ನಿಲ್ಲಬೇಕು. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ವಿಶೇಷ ತರಬೇತಿಯ ಅವಶ್ಯಕತೆಯಿದೆ ಎಂದರು.
ಸಿನಿಮಾ ಕ್ಷೇತ್ರವು ಅತ್ಯಂತ ಕಳಪೆಯಾಗಿದ್ದು ಕನ್ನಡವನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ದ್ವಂದಾರ್ಥ ನೀಡುವ ಪದಗಳ ಬಳಕೆ ಮಾಡಲಾಗುತ್ತಿದೆ. ಕನ್ನಡ ಪತ್ರಿಕೆಗೆ 175 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಕನ್ನಡ ಪತ್ರಿಕೆಗಳನ್ನು ಕೊಂಡು ಓದು ಪ್ರವೃತ್ತಿ ಬೆಳೆಯಬೇಕು. ಕನ್ನಡಿಗರಿಗೆ ಕೆಲಸ ಕೊಡಿಸುವಂತಹ ಹೊಣೆ ಸರ್ಕಾರದ್ದಾಗಿದ್ದು ಇದನ್ನು ಶಾಸಕರು ವಿಧಾನಸಭೆಯಲ್ಲಿ ಪ್ರಶ್ನಿಸಬೇಕು ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಸಕರಿಗೆ ಸೂಚಿಸಿದರು.
ಮನರಂಜನೆಯ ಹೆಸರಿನಲ್ಲಿ ಚಿಕ್ಕ ಚಿಕ್ಕ ಮಕ್ಕಳಿಂದ ಅಶ್ಲೀಲ ದೃಶ್ಯಗಳನ್ನು ತೋರಿಸಲಾಗುತ್ತಿದೆ. ಬಾಲ್ಯವನ್ನು ಬಾಲ್ಯತನದಿಂದಲೆ ಕಳೆಯಲು ಬಿಡಬೇಕು. ಗಂಡ-ಹೆಂಡತಿಯ ಬೆಡ್ ರೂಮ್ ದೃಶ್ಯಗಳನ್ನು ಚಿಕ್ಕಮಕ್ಕಳಿಂದ ಮಾಡಿಸಲಾಗುತ್ತಿದ್ದು, ಇದರಿಂದ ಮಕ್ಕಳ ಬಾಲ್ಯ ಮಾಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಬಿಗ್‌ಬಾಸ್ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯ ಮೇಲೆ ದಾಳಿ ಮಾಡಲಾಗುತ್ತಿದೆ. ಮಹಿಳೆಯರ ಮಾನ ಹರಾಜು ಹಾಕುವ ದೃಶ್ಯಾವಳಿಗಳು ನಿರ್ಮಿಸಲಾಗುತ್ತಿದೆ. ಪ್ರಚಾರಕ್ಕೆ ಮಹಿಳೆರನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಟ್ಕಳದ ಕಾರ್ಯನಿತರ ಪತ್ರಕರ್ತರ ಸಂಘ 25 ವರ್ಷಗಳು ಪೂರೈಸಿದ್ದು ಇಂದು ಹಬ್ಬದ ವಾತವರಣವನ್ನೇ ಸೃಷ್ಟಿಸಿದ್ದಾರೆ. ಅಷ್ಟು ದೂರದಿಂದ ಬಂದ ತಮ್ಮ ಶ್ರಮ ಸಾರ್ಥಕವಾಯಿತು ಎಂದು ಹೇಳಿದರು.
ಶಾಸಕ ಮಾಂಕಾಳ್ ಎಸ್. ವೈದ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು, ಸಾಹಿತಿ ಡಾ.ಸೈಯ್ಯದ್ ಝಮಿರುಲ್ಲಾ ಷರೀಫ್, ಸುವರ್ಣ ಕವರ್ ಸ್ಟೋರಿ ಸಂಪಾದಕಿ ವಿಜಯಲಕ್ಷ್ಮಿ ಶಿಬರೂರು, ಚಿತ್ರನಟ ಪ್ರೇಮ್ ಮತ್ತಿತರರು ಮಾತನಾಡಿದರು.
ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್ ಅಲ್ತಾಫ್ ಖರೂರಿ, ಶ್ರೀ ಗುರುಸುಧೀಂದ್ರ ಕಾಲೇಜಿನ ಟ್ರಸ್ಟಿ ರಾಜೇಶ್ ನಾಯಕ, ಉ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಭ್ರಾಯ ಭಕ್ಕಳ, ಅನುಪಮ ಭಟ್, ಶ್ರೇಯಾ ಅಂಚನ್ ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರಾಧಕೃಷ್ಣ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು.
ಉಪಾಧ್ಯಕ್ಷ ಎಂ.ಆರ್.ಮಾನ್ವಿ ಸ್ವಾಗತಿಸಿದರು.
ಕಾರ್ಯದರ್ಶಿ ಭಾಸ್ಕರ್ ನಾಯ್ಕ ವಂದಿಸಿದರು.
ಶ್ರೀಧರ್ ಶೇಟ್ ಹಾಗೂ ಕಲ್ಪನಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.







