ಭಾರತ-ಬಾಂಗ್ಲಾದೇಶ ಟೆಸ್ಟ್ ಆಯೋಜನೆಗೆ ಹಣಕಾಸು ಕೊರತೆ!

ಹೈದರಾಬಾದ್, ಜ.8: ಹಣಕಾಸು ಕೊರತೆಯ ಕಾರಣ ಮುಂದಿಟ್ಟುಕೊಂಡು ಹೈದರಾಬಾದ್ ಕ್ರಿಕೆಟ್ ಸಂಸ್ಥೆ(ಎಚ್‌ಸಿಎ) ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಮುಂದಿನ ತಿಂಗಳು ನಡೆಯಬೇಕಾಗಿದ್ದ ಏಕೈಕ ಟೆಸ್ಟ್ ಪಂದ್ಯದ ಆತಿಥ್ಯವಹಿಸಲು ಅಸಹಾಯಕತೆ ವ್ಯಕ್ತಪಡಿಸಿದೆ. ಎಚ್‌ಸಿಎನ ಈ ನಿಲುವಿನಿಂದಾಗಿ ಬಿಸಿಸಿಐ ಹೊಸ ಸಮಸ್ಯೆಗೆ ಸಿಲುಕಿದೆ.
ಫೆ.1 ರಂದು ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಕ್ರಿಕೆಟ್ ಕೊನೆಗೊಂಡ ತಕ್ಷಣ ಬಾಂಗ್ಲಾದೇಶ ತಂಡ ಫೆ.8 ರಂದು ಹೈದರಾಬಾದ್‌ನ ಉಪ್ಪಲ್‌ನ ರಾಜೀವ್‌ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಲು ಭಾರತಕ್ಕೆ ಆಗಮಿಸಲಿದೆ. ಆದರೆ ಎಚ್‌ಸಿಎ ಇದೀಗ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯವನ್ನು ಆಯೋಜಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತಿದೆ.
ಸುಪ್ರೀಂಕೋರ್ಟ್ ಅಕ್ಟೋಬರ್‌ನಲ್ಲಿ ನೀಡಿದ್ದ ತನ್ನ ಆದೇಶದಲ್ಲಿ ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ಬರುವ ತನಕ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ಹಣಕಾಸು ಬಿಡುಗಡೆ ಮಾಡದಂತೆ ತಡೆ ಹೇರಿತ್ತು. ಆ ಬಳಿಕ ಸುಪ್ರೀಂಕೋರ್ಟ್ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಸುಗಮವಾಗಿ ಸಾಗಲು ಹಣ ಬಿಡುಗಡೆ ಮಾಡಲು ಬಿಸಿಸಿಐಗೆ ಅವಕಾಶ ನೀಡಿತ್ತು.
ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ವಿಳಂಬ ನೀತಿ ಅನುಸರಿಸಿದ್ದ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ಜ.2 ರಂದು ನೀಡಿದ್ದ ಮಹತ್ವದ ಆದೇಶದಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಬಿಸಿಸಿಐನ ಕಾರ್ಯಚಟುವಟಿಕೆಯನ್ನು ನೋಡಿಕೊಳ್ಳಲು ಜ.19 ರಂದು ಆಡಳಿತಾಧಿಕಾರಿಗಳ ಸಮಿತಿಯನ್ನು ನೇಮಕಗೊಳಿಸುವುದಾಗಿ ಹೇಳಿತ್ತು.
ಪ್ರಸ್ತುತ ಬಿಸಿಸಿಐನ ಆರ್ಥಿಕ ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಬಿಸಿಸಿಐನ ಸಿಇಒ ರಾಹುಲ್ ಜೊಹ್ರಿ ಎಚ್‌ಸಿಎನ ಈಗಿನ ಹಣಕಾಸು ಸಮಸ್ಯೆಯ ಬಗ್ಗೆ ಲೋಧಾ ಸಮಿತಿಯ ಗಮನಕ್ಕೆ ತರುವ ಸಾಧ್ಯತೆಯಿದೆ. ಇದೇ ವೇಳೆ, ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್‌ಸಿಎ) ಕೂಡ ಫೆಬ್ರವರಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್‌ನ ಅಂಡರ್-19 ತಂಡಗಳ ನಡುವೆ ಎರಡು ಪಂದ್ಯಗಳ ಆತಿಥ್ಯವಹಿಸಲು ನಿರಾಕರಿಸಿದೆ.
ನಾಲ್ಕು ದಿನಗಳ ಕಾಲ ನಡೆಯುವ ಪಂದ್ಯ ಫೆ.13 ರಿಂದ 16 ಹಾಗೂ ಫೆ.21 ರಿಂದ 24ರ ತನಕ ಚೆನ್ನೈನಲ್ಲಿ ನಿಗದಿಯಾಗಿತ್ತು. ಆ ಸಮಯದಲ್ಲಿ ದೇಶೀಯ ಕಾರ್ಯಕ್ರಮಗಳು ಇರುವ ಕಾರಣ ಪಂದ್ಯದ ಆತಿಥ್ಯ ವಹಿಸಲು ಅಸಹಾಯಕತೆ ವ್ಯಕ್ತಪಡಿಸಿದೆ.
‘‘ಭಾರತ-ಇಂಗ್ಲೆಂಡ್ ಅಂಡರ್-19 ತಂಡಗಳ ನಾಲ್ಕುದಿನಗಳ ಪಂದ್ಯದ ಆತಿಥ್ಯದ ಹಕ್ಕನ್ನು ಚೆನ್ನೈಗೆ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವೆವು. ಆ ಸಮಯದಲ್ಲಿ ಹಲವು ದೇಶೀಯ ಕಾರ್ಯಕ್ರಮ ನಿಗದಿಯಾಗಿರುವ ಕಾರಣ ಚೆನ್ನೈನಲ್ಲಿ ಪಂದ್ಯ ಆಯೋಜಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ಬರೆದ ಪತ್ರದಲ್ಲಿ ತಿಳಿಸಿದೆ.







