ಸೌದಿ ರಾಜಧಾನಿಯಲ್ಲಿ ಇಬ್ಬರು ಐಸಿಸ್ ಉಗ್ರರ ಹತ್ಯೆ

ಜಿದ್ದಾ, ಜ. 8: ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನ ಉತ್ತರದ ಜಿಲ್ಲೆಯೊಂದರಲ್ಲಿ ಶನಿವಾರ ನಡೆದ ಗುಂಡಿನ ಕಾಳಗವೊಂದರಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಕೊಂದಿವೆ.
ಅಲ್-ಯಾಸ್ಮೀನ್ ಜಿಲ್ಲೆಯ ಮನೆಯೊಂದರಲ್ಲಿ ಘೋಷಿತ ಭಯೋತ್ಪಾದಕರು ಆಶ್ರಯ ಪಡೆದಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಭದ್ರತಾ ಪಡೆಗಳು ಆ ಸ್ಥಳವನ್ನು ಸುತ್ತುವರಿದು ಭಯೋತ್ಪಾದಕರಿಗೆ ಶರಣಾಗುವಂತೆ ಸೂಚಿಸಿದವು ಎಂದು ಭದ್ರತಾ ಮೂಲಗಳು ‘ಅರಬ್ ನ್ಯೂಸ್’ಗೆ ತಿಳಿಸಿದವು.
ಕಲಾಶ್ನಿಕೊವ್ ರೈಫಲ್‌ಗಳನ್ನು ಹೊಂದಿದ್ದ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿ ಭದ್ರತಾ ಪಡೆಗಳ ಕಾರೊಂದರಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆಗ ಕಾರಿನ ಹಿಂಭಾಗದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಇಬ್ಬರು ಭಯೋತ್ಪಾದಕರತ್ತ ಗುಂಡು ಹಾರಿಸಿ ಕೊಂದು ಹಾಕಿದರು ಎಂದು ಮೂಲಗಳು ಹೇಳಿವೆ.
ಕಾಳಗದಲ್ಲಿ ಆ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಉಗ್ರರ ಪೈಕಿ ಓರ್ವ ಪೊಲೀಸರಿಗೆ ಬೇಕಾಗಿದ್ದ ಭಯಾನಕ ಭಯೋತ್ಪಾದಕನಾಗಿದ್ದನು. ಅವರಿಬ್ಬರೂ ಐಸಿಸ್ ಭಯೋತ್ಪಾದಕ ಸಂಘಟನೆಗೆ ಸೇರಿದವರಾಗಿದ್ದಾರೆ.








