ಚು.ಆಯೋಗವು ಜ.17ಕ್ಕೆ ಮೊದಲು ನಿರ್ಧಾರ ಕೈಗೊಳ್ಳದಿದ್ದರೆ ಎಸ್‌ಪಿ ಚಿಹ್ನೆ ಸ್ತಂಭನ ಸಾಧ್ಯತೆ

ಹೊಸದಿಲ್ಲಿ,ಜ.8: ಅಖಿಲೇಶ್ ಮತ್ತು ಮುಲಾಯಂ ಬಣಗಳ ಪೈಕಿ ಯಾವುದು ಪಕ್ಷದಲ್ಲಿ ಬಹುಮತ ಹೊಂದಿದೆ ಎನ್ನುವುದನ್ನು ಜ.17ರ ಮೊದಲು ನಿರ್ಧರಿಸಲು ಚುನಾವಣಾ ಆಯೋಗಕ್ಕೆ ಸಾಧ್ಯವಾಗದಿದ್ದರೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಯು ಸ್ತಂಭನಕ್ಕೊಳಗಾಗಬಹುದು. ಕಳೆದ ವಾರ ಎಸ್‌ಪಿ ಎರಡು ಹೋಳುಗಳಾದ ಬಳಿಕ ಮುಲಾಯಂ ಸಿಂಗ್ ಯಾದವ ಮತ್ತು ಪುತ್ರ ಅಖಿಲೇಶ್ ನೇತೃತ್ವದ ಎರಡೂ ಬಣಗಳು ಪಕ್ಷ ಮತ್ತು ಚಿಹ್ನೆಯ ಮೇಲೆ ಹಕ್ಕು ಮಂಡಿಸಿ ಚುನಾವಣಾ ಆಯೋಗದ ಮೆಟ್ಟಿಲನ್ನೇರಿವೆ.
ತಮ್ಮ ಹಕ್ಕು ಕೋರಿಕೆಗೆ ಸಮರ್ಥನೆಯಾಗಿ ಉಭಯ ಬಣಗಳು ಕೆಲವು ದಾಖಲೆಗಳನ್ನು ಸಲ್ಲಿಸಿದ್ದು, ಪಕ್ಷದ ಮೇಲೆ ನಿಯಂತ್ರಣ ಮತ್ತು ಚಿಹ್ನೆಯ ಹಕ್ಕು ಸಾಧಿಸಲು ಶಾಸಕರು ಮತ್ತು ಪದಾಧಿಕಾರಿಗಳು ಸಹಿ ಮಾಡಿರುವ ಅಫಿದವತ್‌ಗಳನ್ನು ಸೋಮವಾರದೊಳಗೆ ಸಲ್ಲಿಸುವಂತೆ ಆಯೋಗವು ಅವುಗಳಿಗೆ ಸೂಚಿಸಿದೆ. ಅರ್ಧಕ್ಕಿಂತ ಹೆಚ್ಚು ಸಂಸದರು, ಶಾಸಕರು ಮತ್ತು ಪ್ರತಿನಿಧಿಗಳ ಬೆಂಬಲವನ್ನು ಹೊಂದಿರುವ ಬಣವು 25ವರ್ಷಗಳಷ್ಟು ಹಳೆಯದಾದ ಎಸ್‌ಪಿ ಮೇಲಿನ ನಿಯಂತ್ರಣಕ್ಕಾಗಿ ಹೋರಾಟದಲ್ಲಿ ಮೇಲುಗೈ ಹೊಂದಲಿದೆ.
ಫೆ.2ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗಾಗಿ ಅಧಿಸೂಚನೆ ಜ.17ರಂದು ಹೊರಬೀಳಲಿದ್ದು, ಅದಕ್ಕೇ ಮೊದಲೇ ಆಯೋಗವು ಎಸ್‌ಪಿಯಲ್ಲಿ ಯಾವ ಬಣ ಬಹುಮತ ಹೊಂದಿದೆ ಎನ್ನುವುದನ್ನು ನಿರ್ಧರಿಸಬೇಕಾಗುತ್ತದೆ. ಅಧಿಸೂಚನೆಯ ಪ್ರಕಟಣೆಯೊಂದಿಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಮುಲಾಯಂ ಮತ್ತು ಅಖಿಲೇಶ್ ಬಣಗಳು ಏಕಕಾಲದಲ್ಲಿ ಸೈಕಲ್ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಜ.17ರ ಮೊದಲೇ ಚುನಾವಣಾ ಆಯೋಗವು ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ.
ಒಂದು ವೇಳೆ ಎರಡೂ ಬಣಗಳು ಸಮಾನ ಸಂಖ್ಯೆಯ ಸಂಸದರು, ಶಾಸಕರು ಮತ್ತು ಪ್ರತಿನಿಧಿಗಳ ಬೆಂಬಲವನ್ನು ಪಡೆದರೆ ಮತ್ತು ಅಂತಿಮ ನಿರ್ಧಾರವನ್ನು ಕೈಗೊಳ್ಳಲು ಆಯೋಗಕ್ಕೆ ಸಾಧ್ಯವಾಗದಿದ್ದರೆ ಅದು ಮಧ್ಯಂತರ ಆದೇಶವೊಂದನ್ನು ಹೊರಡಿಸಬಹುದು. ಚಿಹ್ನೆಯನ್ನು ಸ್ತಂಭನಗೊಳಿಸುವುದು ಲಭ್ಯವಿರುವ ಇಂತಹ ಒಂದು ಪರ್ಯಾಯವಾಗಿದೆ ಎಂದು ಮೂಲವೊಂದು ತಿಳಿಸಿತು. ವಿವಾದವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಎರಡೂ ಬಣಗಳು ಸಿದ್ಧವಿದ್ದರೆ ಆಯೋಗವು ಜ.17ಕ್ಕೆ ಮೊದಲೇ ನಿರ್ಧಾರವೊಂದನ್ನು ಕೈಗೊಳ್ಳಬಹುದು ಎಂದು ಇನ್ನೊಂದು ಮೂಲವು ತಿಳಿಸಿದೆ.
ಚುನಾವಣೆಗಳು ಸನ್ನಿಹಿತವಾದಾಗ ಮತ್ತು ಉಭಯ ಬಣಗಳು ಹೊಂದಿರುವ ಬೆಂಬಲವನ್ನು ದೃಢಪಡಿಸಿಕೊಳ್ಳಲು ಆಯೋಗಕ್ಕೆ ಸಮಯಾವಕಾಶವಿಲ್ಲದಿದ್ದಾಗ ಅದು ಹೊಸ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಆಯ್ದುಕೊಳ್ಳುವಂತೆ ಉಭಯ ಬಣಗಳಿಗೆ ಸೂಚಿಸಿ ಮಧ್ಯಂತರ ಆದೇಶವನ್ನು ಹೊರಡಿಸಬಹುದಾಗಿದೆ ಎಂದೂ ಮೂಲಗಳು ತಿಳಿಸಿದವು.







