ತಾನೊಬ್ಬ ಭಾರತೀಯನೆಂದು ಹೇಳಿಕೊಳ್ಳಲು ಹೆಮ್ಮೆ: ಪೋರ್ಚುಗಲ್ ಪ್ರಧಾನಿ ಡಾ.ಆಂಟೋನಿಯೋ

ಬೆಂಗಳೂರು, ಜ. 8: ‘ತಾನೊಬ್ಬ ಭಾರತೀಯನೆಂದು ಹೇಳಿಕೊಳ್ಳಲು ನನಗೆ ಅತ್ಯಂತ ಹೆಮ್ಮೆ ಎನ್ನಿಸುತ್ತದೆ ಎಂದು ಪೋರ್ಚುಗಲ್ ಪ್ರಧಾನಿ ಡಾ.ಆಂಟೋನಿಯೋ ಕೋಸ್ಟಾ ಇಂದಿಲ್ಲಿ ತಿಳಿಸಿದ್ದಾರೆ.
ರವಿವಾರ ಇಲ್ಲಿನ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿರುವ ಪ್ರವಾಸಿ ಭಾರತೀಯ ದಿವಸ್ ಎರಡನೆ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಪೂರ್ವಜರು ಭಾರತ ದೇಶದ ಗೋವಾ ಮೂಲದವರೆಂದು ದಾಖಲೆಯನ್ನು ಸಮಾರಂಭದಲ್ಲಿ ಪ್ರದರ್ಶಿಸಿದರು.
ಬಹಳ ಹಿಂದೆಯೇ ಪೋರ್ಚುಗಲ್‌ಗೆ ವಲಸೆ ಹೋಗಿದ್ದು, ತಾನು ಭಾರತಕ್ಕೆ ಬಂದಾಗ ಗೋವಾಕ್ಕೆ ತೆರಳಿ ತಮ್ಮ ಸಂಬಂಧಿಕರನ್ನು ಭೇಟಿ ಮಾಡುತ್ತೇನೆ ಎಂದ ಆಂಟೋನಿಯಾ ಕೋಸ್ಟಾ, ಪೋರ್ಚುಗಲ್ ಹಾಗೂ ಭಾರತದ ನಡುವೆ ಶತಮಾನಕ್ಕೂ ಮೀರಿದ ಬಾಂಧವ್ಯವಿದೆ ಎಂದು ಹೇಳಿದರು.
ಉಭಯ ದೇಶಗಳ ಅಭಿವೃದ್ಧಿಗೆ ತಾನು ಆಸಕ್ತನಾಗಿದ್ದು, ಶಿಕ್ಷಣ, ಕೈಗಾರಿಕೆ, ಮೂಲಸೌಕರ್ಯ, ಹೂಡಿಕೆ ವಲಯದಲ್ಲಿ ಭಾರತಕ್ಕೆ ತಾವು ನೆರವು ನೀಡಲು ಸಿದ್ದ ಎಂದ ಅವರು, ಭಾರತೀಯರು ತಮ್ಮನ್ನು ಬಳಸಿಕೊಳ್ಳಬಹುದು ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಸುರಕ್ಷತೆಗೆ ಆದ್ಯತೆ: ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ವಿದೇಶಿ ಪ್ರವಾಸಿಗರು ಸೇರಿದಂತೆ ಮಹಿಳೆಯರ ಸುರಕ್ಷತೆ ತಮ್ಮ ಸರಕಾರದ ಮೊದಲ ಆದ್ಯತೆಯಾಗಿದೆ. ಬೆಂಗಳೂರು ನಗರದಲ್ಲಿನ ಇತ್ತೀಚಿನ ಘಟನೆಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಸಂಶೋಧನೆ, ಮಾಹಿತಿ ತಂತ್ರಜ್ಞಾನ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಾಶಸ್ತ್ಯ ಸ್ಥಳವಾಗಿದೆ. ಮಾತ್ರವಲ್ಲ ದೇಶದಲ್ಲಿ ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ನವೋದ್ಯಮದ ವಲಯದಲ್ಲಿಯೂ ಪ್ರಪಂಚದಲ್ಲೆ ಕರ್ನಾಟಕ ಮೂರನೆ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಸ್ವಾಗತ ಭಾಷಣ ಮಾಡಿದ ಕೇಂದ್ರ ಸಚಿವ ಅನಂತಕುಮಾರ್, ಪ್ರವಾಸಿ ಭಾರತೀಯ ದಿವಸ್‌ನಲ್ಲಿ 72ರಾಷ್ಟ್ರಗಳ ಪ್ರತಿನಿಧಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಯಶಸ್ಸಿಯ ಹಂತದಲ್ಲಿದೆ. ಅದೇ ರೀತಿ ಕೇಂದ್ರದ ವಿದೇಶಾಂಗ ನೀತಿ ಅನಿವಾಸಿ ಭಾರತೀಯರ ಸ್ನೇಹಿಯಾಗಿದೆ ಎಂದರು.







