ತಮಿಳುನಾಡಿನ 10 ಮೀನುಗಾರರನ್ನು ಬಂಧಿಸಿದ ಶ್ರೀಲಂಕ

ರಾಮೇಶ್ವರಂ, ಜ.8: ತಮ್ಮ ಜಲವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು ಎಂಬ ಆರೋಪದಡಿ ಶ್ರೀಲಂಕಾದ ನೌಕಾಸೇನೆ ತಮಿಳುನಾಡಿನ 10 ಮೀನುಗಾರರನ್ನು ಬಂಧಿಸಿ ಅವರ ದೋಣಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ರಾಮೇಶ್ವರಂನಿಂದ ಶನಿವಾರ ಮೀನುಗಾರಿಕೆಗೆ ಹೊರಟಿದ್ದ ಮೀನುಗಾರರನ್ನು ಶ್ರೀಲಂಕಾದ ನೌಕಾಸೇನೆಯು ಕಚ್ಛತೀವು ಬಳಿ ಇಂದು ಬೆಳಿಗ್ಗೆ ಬಂಧಿಸಿ ಶ್ರೀಲಂಕಾದ ಥಲೈಮನ್ನಾರ್‌ಗೆ ಕೊಂಡೊಯ್ದಿದೆ . ಪುದುಕೊಟ್ಟೈ ಜಿಲ್ಲೆಯಿಂದ ಮೀನುಗಾರಿಕೆಗೆ ಹೊರಟಿದ್ದವರನ್ನು ನೆಡುಂತೀವು ಬಳಿ ಬಂಧಿಸಲಾಗಿದ್ದು ಅವರನ್ನು ಕಂಗೆಸಂಥುರೈ ಬಂದರಿಗೆ ಕೊಂಡೊಯ್ಯಲಾಗಿದೆ ಎಂದು ಮೀನುಗಾರಿಕಾ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಮೀನುಗಾರರನ್ನು ಬಂಧಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು ಕೇಂದ್ರ ಸರಕಾರ ತಕ್ಷಣ ಮಧ್ಯಪ್ರವೇಶಿಸಿ ಈ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ರಾಷ್ಟ್ರಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಮಿಳಿನಾಡು ಮತ್ತು ಪುದುಚೇರಿ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಜೆ.ಬೋಸ್ ಆಗ್ರಹಿಸಿದ್ದಾರೆ. ಶ್ರೀಲಂಕಾದ ಸೇನೆಯು ತಮಿಳ್ನಾಡಿನ ಮೀನುಗಾರರನ್ನು ಪದೇ ಪದೇ ಬಂಧಿಸುತ್ತಿದ್ದು ಈ ಸಮಸ್ಯೆ ಬಗ್ಗೆ ಉನ್ನತ ಮಟ್ಟದಲ್ಲಿ ಸಮಾಲೋಚಿಸಿ ಪರಿಹರಿಸುವಂತೆ ಜನವರಿ 5ರಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಒತ್ತಾಯಿಸಿದ್ದಾರೆ.





