ಕಣಿವೆಗೆ ಉರುಳಿದ ಮಿನಿ ಬಸ್: ತಪ್ಪಿದ ದುರಂತ
ಶಂಕರನಾರಾಯಣ, ಜ.8: ಕಮಲಶಿಲೆ ಸಮೀಪದ ಗೋಳಿಮರ ಕ್ರಾಸ್ ಎಂಬಲ್ಲಿ ಇಂದು ಮಿನಿ ಬಸ್ಸೊಂದು ಕಣಿವೆಯಲ್ಲಿ ಉರುಳಿ ಬಿದ್ದ ಪರಿಣಾಮ 15 ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಅಪಘಾತದಿಂದ ಕಾಪು ಎಲ್‌ಐಸಿಯ ಶ್ರೀನಿವಾಸ ಕಿಣಿ(50), ಹೇಮ ಲತಾ(50), ಶ್ರೀಶಾ (10), ಲಕ್ಷ್ಮಣ್ ನಾಯಕ್(50) ಎಂಬವರು ತೀವ್ರ ವಾಗಿ ಗಾಯಗೊಂಡಿದ್ದು, ಉಳಿದ 11 ಮಂದಿ ಸಣ್ಣ ಪುಟ್ಟ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಪು ಎಲ್‌ಐಸಿಯ ಅಧಿಕಾರಿಗಳು ಹಾಗೂ ಕುಟುಂಬದವರು ಇಂದು ಬೆಳಗ್ಗೆ ಕಮಲಶಿಲೆ ಅರಣ್ಯ ಮಧ್ಯೆ ಇರುವ ಗುಹಾಲಯಕ್ಕೆ ಕಾಪುವಿನ ಪವನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನ ಮಿನಿ ಬಸ್‌ನಲ್ಲಿ ತೆರಳಿದ್ದು, ಅಲ್ಲಿ ಊಟ ಮುಗಿಸಿ ಗುಹಾಲಯವನ್ನು ನೋಡಿ ವಾಪಾಸ್ಸು ಬರುವಾಗ ಚಾಲಕನ ನಿರ್ಲಕ್ಷದಿಂದ ಬಸ್ ನಿಯಂತ್ರಣ ತಪ್ಪಿ ಕಣಿವೆಯತ್ತ ಉರುಳಿತು.
ಬಹಳಷ್ಟು ಅಪಾಯಕಾರಿಯಾಗಿರುವ ಕಣಿವೆ ಮರದಿಂದ ಕೂಡಿರುವುದರಿಂದ ಬಸ್ ಮರದ ಮಧ್ಯೆ ಸಿಲುಕಿಗೊಂಡಿತು. ಇದರಿಂದ ಭಾರೀ ದುರಂತವೊಂದು ತಪ್ಪಿದಂತಾಯಿತು.
ಅಪಘಾತದಿಂದ ಬಸ್ ಜಖಂಗೊಂಡು ಬಸ್ಸಿನಲ್ಲಿದ್ದ ಹಲವು ಮಂದಿ ಗಾಯಗೊಂಡರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





