ಅಭಿವೃದ್ಧಿಯೇ ಚುನಾವಣೆಯ ಮಂತ್ರ: ಜಾವಡೇಕರ್

ಉಡುಪಿ, ಜ.8: ಅಭಿವೃದ್ಧಿ..ಅಭಿವೃದ್ಧಿ...ಅಭಿವೃದ್ಧಿ .. ಇದೇ ಮುಂಬರುವ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಮಂತ್ರವಾಗಿದೆ. ಎಲ್ಲರಿಗೂ ನ್ಯಾಯ ಹಾಗೂ ಉದ್ಯೋಗ ನಮ್ಮ ಅಜೆಂಡಾವಾಗಿದೆ. ಕೇಂದ್ರದ ಮೋದಿ ಸರಕಾರ ಇದೇ ನಿಟ್ಟಿನಲ್ಲಿ ಎಲ್ಲಾ ನಿರ್ಧಾರಗಳನ್ನೂ ಕೈಗೊಂಡಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಸಂಸ್ಕೃತಿ ಭಾರತಿ ವತಿಯಿಂದ ನಡೆದಿರುವ ಅಖಿಲ ಭಾರತೀಯ ಸಂಸ್ಕೃತ ಅಧಿವೇಶನದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಚಿವರು ಶ್ರೀಕೃಷ್ಣ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ನಾವು ಬೇನಾಮಿ ಪ್ರಾಪರ್ಟಿ ಆ್ಯಕ್ಟ್‌ನ್ನು ಜಾರಿಗೊಳಿಸಿದ್ದೇವೆ. ಕಪ್ಪುಹಣದ ನಿಗ್ರಹಕ್ಕೆ ಕ್ರಮ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿ 500ರೂ. ಹಾಗೂ 1000ರೂ. ನೋಟುಗಳ ನಿಷೇಧದ ಕ್ರಮವನ್ನು ದೇಶದ ಪ್ರತಿಯೊಬ್ಬರು ಸ್ವಾಗತಿಸಿದ್ದಾರೆ. ಹೀಗಾಗಿ ನಾವು ಅಭಿವೃದ್ಧಿ ಕಾರ್ಯಕ್ರಮ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮೂಲಕವೇ ಐದು ರಾಜ್ಯಗಳ ಚುನಾವಣೆಯನ್ನು ಎದುರಿಸಲಿದ್ದೇವೆ ಎಂದವರು ಹೇಳಿದರು.
ಮುಂದಿನ ವರ್ಷ ಜಾರಿಗೆ ಬರುವ ನೂತನ ಶಿಕ್ಷಣ ನೀತಿಯ ಕುರಿತು ಪ್ರಶ್ನಿಸಿದಾಗ, ಈ ಬಗ್ಗೆ ಸಂಬಂಧಿತ ಎಲ್ಲರ ಸಲಹೆ-ಸೂಚನೆಗಳನ್ನು ಪಡೆದಿದ್ದೇವೆ. ಅವುಗಳನ್ನು ದೇಶದ ಪ್ರಮುಖ ಶಿಕ್ಷಣತಜ್ಞರನ್ನೊಳಗೊಂಡಂತೆ ರಚಿಸಿರುವ ಸಮಿತಿಯ ಮುಂದಿರಿಸಿ ಅವರು ನೀಡುವ ಶಿಫಾರಸ್ಸಿನ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಅವಕಾಶದ ಕುರಿತಂತೆ ಪ್ರಶ್ನಿಸಿದಾಗ, ಐದೂ ರಾಜ್ಯಗಳಲ್ಲಿ ನಾವು ಜಯಭೇರಿ ಬಾರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಪಾತ್ರವಿಲ್ಲ
ಧಾರವಾಡದಲ್ಲಿ ಸ್ಥಾಪಿತವಾದ ಐಐಟಿಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಮೀಸಲಿಡಬೇಕೆಂಬ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಆಗ್ರಹದ ಕುರಿತು ಪ್ರಶ್ನಿಸಿದಾಗ, ಈ ಬೇಡಿಕೆಯನ್ನು ತಳ್ಳಿ ಹಾಕಿದ ಪ್ರಕಾಶ್ ಜಾವಡೇಕರ್, ಸೀಟು ಮೀಸಲಾತಿಯಲ್ಲಿ ರಾಜ್ಯಕ್ಕೆ ಯಾವುದೇ ಪಾತ್ರವಿರುವುದಿಲ್ಲ ಎಂದರು.







