ಚೆನ್ನೈ ಓಪನ್: ಬೋಪಣ್ಣ-ಜೀವನ್ ಐತಿಹಾಸಿಕ ಜಯ

ಚೆನ್ನೈ, ಜ.8: ಭಾರತದ ರೋಹನ್ ಬೋಪಣ್ಣ ಹಾಗೂ ಜೀವನ್ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ರವಿವಾರ ಇಲ್ಲಿ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಬೋಪಣ್ಣ-ಜೀವನ್ ಜೋಡಿ ತಮ್ಮದೇ ದೇಶದ ಪೂರವ್ ರಾಜಾ ಹಾಗೂ ಡಿವಿಜ್ ಶರಣ್ ಜೋಡಿಯನ್ನು 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿತು.
ಬೋಪಣ್ಣ ಹಾಗೂ ಜೀವನ್ ಎರಡನೆ ಬಾರಿ ಫೈನಲ್‌ಗೆ ತಲುಪಿದ್ದು ಕೊನೆಗೂ ಪ್ರಶಸ್ತಿ ಜಯಿಸಲು ಯಶಸ್ವಿಯಾಗಿದ್ದಾರೆ. ಮೂರನೆ ಬಾರಿ ಫೈನಲ್‌ಗೆ ತಲುಪಿದ್ದ ರಾಜಾ ಹಾಗೂ ಶರಣ್ ಪ್ರಶಸ್ತಿ ಗೆಲ್ಲಲು ವಿಫಲರಾದರು.
ಚೆನ್ನೈ ಓಪನ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಭಾರತದ ಡಬಲ್ಸ್ ಆಟಗಾರರು ಫೈನಲ್‌ನಲ್ಲಿ ಸೆಣಸಾಡಿದರು. ಪ್ರಶಸ್ತಿ ಭಾರತದ ಪಾಲಾಯಿತು.
ಆತಿಥೇಯ ಭಾರತ ತಂಡ ಐದು ವರ್ಷಗಳ ಬಳಿಕ ಚೆನ್ನೈ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದೆ. 2011ರಲ್ಲಿ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಕೊನೆಯ ಬಾರಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.
ಟೆನಿಸ್ ದಂತಕತೆ ಪೇಸ್-ಮಹೇಶ್ ಜೋಡಿ ನುಂಗಂಬಾಕಂ ಸ್ಟೇಡಿಯಂನಲ್ಲಿ 5 ಬಾರಿ ಪ್ರಶಸ್ತಿ ಜಯಿಸಿದೆ.







