900 ನಿವೇಶನರಹಿತರಿಗೆ ವಸತಿ ಸಂಕೀರ್ಣ: ಶಾಸಕ ಮೊಯ್ದಿನ್ ಬಾವಾ

ಮಂಗಳೂರು, ಜ.8: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಮನಪಾ ವ್ಯಾಪ್ತಿಯ ನಿವೇಶನ ರಹಿತ 900 ಮಂದಿಗೆ ಫ್ಲಾಟ್ ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸುವ ಯೋಜನೆಯು ಪ್ರಗತಿಯಲ್ಲಿದೆ ಎಂದು ಶಾಸಕ ಬಿ.ಎ. ಮೊಯ್ದಿನ್ ಬಾವಾ ತಿಳಿಸಿದ್ದಾರೆ.
ಮನಪಾದಲ್ಲಿ ನಡೆದ ಕ್ಷೇತ್ರ ವ್ಯಾಪ್ತಿಯ ನಗರ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುರತ್ಕಲ್ ಸಮೀಪದ ಇಡ್ಯಾ ಗ್ರಾಮದ ಸ.ನಂ.16ರಲ್ಲಿ ಕಾದಿರಿಸಿದ 3.86 ಎಕರೆ ಜಮೀನಿನಲ್ಲಿ ಜಿ ಪ್ಲಸ್ 3 ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸಿ ನಿವೇಶನ ರಹಿತ 600 ಫಲಾನುಭವಿಗಳಿಗೆ ವಿತರಿಸುವ ಸಲುವಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗಿದೆ. ಅಲ್ಲದೆ ಸುರತ್ಕಲ್ ಗ್ರಾಮದ 1.85 ಎಕರೆ ಜಮೀನಿನಲ್ಲಿ ಜಿ ಪ್ಲಸ್ 3 ಮಾದರಿಯ ವಸತಿ ಸಂಕೀರ್ಣ ನಿರ್ಮಿಸಿ ನಿವೇಶನ ರಹಿತ 300 ಫಲಾನುಭವಿಗಳಿಗೆ ವಿತರಿಸಲು ಅರ್ಹ ಫಲಾನುಭಗಳನ್ನು ಈಗಾಗಲೇ ನಗರ ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ. ಈ ಯೋಜನೆಯ ಡಿಪಿಆರ್ ಕೂಡ ಪ್ರಗತಿಯಲ್ಲಿದೆ ಎಂದರು.
ಈ ಎರಡೂ ಯೋಜನೆಗಳ 900 ಫಲಾನುಭವಿಗಳಿಗೆ ಜಿ ಪ್ಲಸ್ 3 ಮಾದರಿಯ ವಸತಿ ಸಂಕೀರ್ಣ ಒದಗಿಸಲು ಈ ತಿಂಗಳ ಅಂತ್ಯದೊಳಗೆ ಫಲಾನುಭವಿಗಳಿಂದ ಒಪ್ಪಿಗೆ ಪತ್ರ ಪಡೆಯಲಾಗುವುದು. ವಾಜಪೇಯಿ ನಗರ ನಿವೇಶನ ಯೋಜನೆಯಡಿ ಸುರತ್ಕಲ್ ಗ್ರಾಮದ ಸ.ನಂ. 211/4ರಲ್ಲಿ ಲಭ್ಯವಿರುವ 1.95 ಎಕರೆ ಜಮೀನಿನಲ್ಲಿ ನಿವೇಶನ ರಹಿತ 18 ಕೊರಗ ಸಮುದಾಯದ ಕುಟುಂಬಗಳಿಗೆ ತಲಾ 20/30 ಚದರ ಅಡಿಯ ನಿವೇಶನ ಮಂಜೂರು ಮಾಡಲಾಗುವುದು. ಅಲ್ಲದೆ ಈ ಯೋಜನೆಯಲ್ಲಿ 2016-17ನೆ ಸಾಲಿನಲ್ಲಿ 20 ಮಂದಿಗೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ 16 ಫಲಾನುಭವಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಮೊಯ್ದಿನ್ ಬಾವಾ ಹೇಳಿದರು.
ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಿಸಲು ಸಾಲ ಮರುಪಾವತಿ ಮಾಡಿರುವವರಿಗೆ ಹಾಗೂ ಆಶ್ರಯ ಸಾಲ ಮನ್ನಾ ಯೋಜನೆಯ ಫಲಾನುಭವಿಗಳಿಗೆ ಕೂಡಲೇ ಹಕ್ಕುಪತ್ರಗಳನ್ನು ವಿತರಿಸುವಂತೆ ಮನಪಾ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಫಲಾನುಭವಿಗಳಿಗೆ ಅನುಕೂಲವಾಗುವಂತೆ ಕ್ಷೇತ್ರದ 5 ಕಡೆ ಹಕ್ಕುಪತ್ರಗಳನ್ನು ವಿತರಿಸಲು ಕ್ರಮಕೈಗೊಳ್ಳಲು ತಿಳಿಸಿದರು.
ಸಭೆಯಲ್ಲಿ ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್, ಆಶ್ರಯ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ್ ಕೋಡಿಕಲ್, ಜಲೀಲ್ ಕೃಷ್ಣಾಪುರ, ಅಧಿಕಾರಿಗಳು ಉಪಸ್ಥಿತರಿದ್ದರು.







