ಶರೀಅತ್ ವಿಷಯದಲ್ಲಿ ಯಾವುದೇ ರಾಜಿ ಇಲ್ಲ: ಮೌಲಾನಾ ರಾಬೆಅ್ ನದ್ವಿ
ಜಾಮಿಅಃ ನೂರಿಯಾ ಸನದುದಾನ ಸಮ್ಮೇಳನದ ಸಮಾರೋಪ ಸಮಾರಂಭ

ಮಲಪ್ಪುರಂ, ಜ.8 : ಇಸ್ಲಾಂ ಧರ್ಮದನುಸಾರ ಬದುಕುವುದು ಭಾರತದ ಸಂವಿಧಾನದ ಬದ್ದ ಹಕ್ಕು ಆಗಿದೆ. ಇದರಲ್ಲಿ ಯಾವುದೇ ರಾಜಿಮಾಡಿಕೊಳ್ಳಲು ಮುಸ್ಲಿಂ ಸಮುದಾಯ ತಯಾರಿಲ್ಲ. ಶರೀಅತ್ ದೈವಿಕ ನಿಯಮವಾಗಿದೆ. ಶರೀಅತ್‌ನ ಹೆಸರಿನಲ್ಲಿ ಕೇಳಿ ಬರುತ್ತಿರುವ ಆರೋಪಗಳು ನಿರಾಧಾರವಾಗಿದ್ದು, ಅವುಗಳನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡಿನ ಅಧ್ಯಕ್ಷ ಮೌಲನಾ ಮುಹಮ್ಮದ್ ರಾಬಿಅ್ ಅಲ್ ಹಸನ್ ನದ್ವಿ ಹೇಳಿದರು.
ಪಟ್ಟಿಕ್ಕಾಡ್ ಜಾಮಿಅಃ ನೂರಿಯಾ ಅರಬಿಕ್ ಕಾಲೇಜಿನ 54ನೇ ವಾರ್ಷಿಕೋತ್ಸವ ಹಾಗೂ 52ನೆ ಸನದುದಾನ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಸಮಸ್ತದ ಉಪಾದ್ಯಕ್ಷ ಪಾಣಕ್ಕಾಡ್ ಸಯ್ಯದ್ ಹೈದರಲಿ ಶಿಹಾಬ್ ತಂಙಳ್ ವಹಿಸಿದ್ದರು.
ಸಮಸ್ತದ ಕೋಶಾಧಿಕಾರಿ ಸಯ್ಯದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ದುಆಶಿರ್ವಚನಗೈದರು.
ದುಬೈ ಇಂಟರ್‌ನ್ಯಾಶನಲ್ ಹಾಲಿ ಕುರ್‌ಆನ್ ಅವಾರ್ಡ್‌ನ ಉಪಾಧ್ಯಕ್ಷ ಡಾ. ಸಹೀದ್ ಅಬ್ದುಲ್ಲ ಹಾರಿಬ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಸಮಸ್ತದ ಪ್ರಧಾನ ಕಾರ್ಯದರ್ಶಿ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ ಸನದುದಾನ ಭಾಷಣಗೈದರು.
ಪಾಣಕ್ಕಾಡ್ ಸಯ್ಯದ್ ಸಾದಿಕಲೀ ಶಿಹಾಬ್ ತಂಙಳ್, ಎಂಟಿ. ಅಬ್ದುಲ್ಲಾ ಮುಸ್ಲಿಯಾರ್, ಚೇಲಕ್ಕಾಡ್ ಮುಹಮ್ಮದ್ ಮುಸ್ಲಿಯಾರ್, ಪಿ.ಕೆ. ಕುಂಞಾಲಿಕುಟ್ಟಿ, ಸಯ್ಯದ್ ಅಬ್ಬಾಸಲೀ ಶಿಹಾಬ್ ತಂಙಳ್, ಸಯ್ಯದ್ ಹಮೀದಲೀ ಶಿಹಾಬ್ ತಂಙಳ್, ಸಯ್ಯದ್ ಬಶೀರಲೀ ಶಿಹಾಬ್ ತಂಙಳ್, ಸಯ್ಯದ್ ರಶೀದಲೀ ಶಿಹಾಬ್ ತಂಙಳ್, ಸಯ್ಯದ್ ಮುನವ್ವರಲೀ ಶಿಹಾಬ್ ತಂಙಳ್, ಸಯ್ಯದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್, ಎಂಪಿ. ಅಬ್ದುಸ್ಸಮದ್ ಸಮದಾನಿ, ಅಬ್ದುಲ್ ಸಮದ್ ಪೂಕೋಟೂರು, ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವ್ ಮತ್ತಿತರರು ಪಸ್ಥಿತರಿದ್ದರು.







