ಪಾಕ್ ತಂಡಕ್ಕೆ ಹಫೀಝ್ ವಾಪಸ್

ಕರಾಚಿ, ಜ.8: ಐಸಿಸಿಯಿಂದ ಶಂಕಾಸ್ಪದ ಬೌಲಿಂಗ್ ಶೈಲಿ ಆರೋಪದಿಂದ ಮುಕ್ತರಾಗಿರುವ ಆಲ್‌ರೌಂಡರ್ ಮುಹಮ್ಮದ್ ಹಫೀಝ್ ಮುಂಬರುವ ಆಸ್ಟ್ರೇಲಿಯ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಪಾಕಿಸ್ತಾನ ತಂಡಕ್ಕೆ ವಾಪಸಾಗಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಐಸಿಸಿ ಬೌಲಿಂಗ್ ಪರಿಶೀಲನಾ ಪರೀಕ್ಷೆಯಲ್ಲಿ ಹಫೀಝ್ ಪಾಸಾಗಿದ್ದರು. ಅವರು ಈಗಾಗಲೇ ದೇಶಿಯ ಕ್ರಿಕೆಟ್‌ನಲ್ಲಿ ಆಫ್-ಬ್ರೇಕ್ ಶೈಲಿಯಲ್ಲಿ ಬೌಲಿಂಗ್ ಮಾಡಲು ಆರಂಭಿಸಿದ್ದಾರೆ.
ಕೇವಲ ಒಂದು ತಿಂಗಳ ಹಿಂದೆ ದೇಶೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಲು ಪುನರಾರಂಭಿಸಿರುವ ತನಗೆ ಆಸ್ಟ್ರೇಲಿಯ ಪ್ರವಾಸ ದೊಡ್ಡ ಸವಾಲು. ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡದೆ ಒಂದೂವರೆ ತಿಂಗಳು ಕಳೆದಿದೆ ಎಂದು ಹಫೀಝ್ ಹೇಳಿದ್ದಾರೆ.
ಹಫೀಜ್ ಪಾಕಿಸ್ತಾನ ವಿರುದ್ಧದ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 227 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟೆಸ್ಟ್‌ನಲ್ಲಿ 9 ಹಾಗೂ ಏಕದಿನದಲ್ಲಿ 11 ಶತಕಗಳನ್ನು ಬಾರಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ ಆಡಿದ ಬಳಿಕ ಪಾಕ್ ಆಯ್ಕೆಗಾರರ ವಿಶ್ವಾಸ ಗಳಿಸಲು ವಿಫಲರಾಗಿದ್ದರು.
ಐಸಿಸಿ ಕಳೆದ ವರ್ಷದ ಜೂನ್‌ನಲ್ಲಿ ಆಲ್‌ರೌಂಡರ್ ಹಫೀಝ್‌ಗೆ 12 ತಿಂಗಳ ಕಾಲ ಬೌಲಿಂಗ್ ನಡೆಸದಂತೆ ನಿಷೇಧ ಹೇರಿತ್ತು. ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಶಂಕಾಸ್ಪದ ಬೌಲಿಂಗ್ ಆರೋಪಕ್ಕೆ ಗುರಿಯಾದ ಬಳಿಕ ಹಫೀಝ್‌ಗೆ ಬೌಲಿಂಗ್ ಮಾಡದಂತೆ ನಿರ್ಬಂಧ ಹೇರಲಾಗಿತ್ತು.
ಪಾಕಿಸ್ತಾನ-ಆಸ್ಟ್ರೇಲಿಯ ನಡುವಿನ ಮೊದಲ ಏಕದಿನ ಪಂದ್ಯದಲಿ ಜ.13 ರಿಂದ ಆರಂಭವಾಗಲಿದೆ.







