ಇರಾನಿನ ಪ್ರಭಾವಿ ಮಾಜಿ ನಾಯಕ ರಫ್ಸಂಜಾನಿ ನಿಧನ

ಟೆಹರಾನ್,ಜ.8: ಇರಾನಿನ ಮಾಜಿ ಅಧ್ಯಕ್ಷ ಅಕ್ಬರ್ ಹಾಶಿಮಿ ರಫ್ಸಂಜಾನಿ ಅವರು ರವಿವಾರ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಹೃದಯ ಸಮಸ್ಯೆಯಿಂದಾಗಿ ರಫ್ಸಂಜಾನಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ಬೆಳಿಗ್ಗೆ ವರದಿ ಮಾಡಿದ್ದವು. ಸರಕಾರಿ ಟಿವಿ ತನ್ನ ಕಾರ್ಯಕ್ರಮಗಳ ನಡುವೆ ಅವರ ನಿಧನ ವಾರ್ತೆಯನ್ನು ಪ್ರಕಟಿಸಿತು.
ಬಹು ಮಿಲಿಯಾಧೀಶರಾಗಿದ್ದ ರಫ್ಸಂಜಾನಿ ರಾಜಕೀಯ ಮತ್ತು ಉದ್ಯಮದಲ್ಲಿ ತನ್ನ ಚಾಣಾಕ್ಷ ನಡೆಗಳಿಂದಾಗಿ ಅಕ್ಬರ್ ಶಾ ಅಥವಾ ಗ್ರೇಟ್ ಕಿಂಗ್‌ನಂತಹ ಉಪನಾಮಗಳಿಗೆ ಪಾತ್ರರಾಗಿದ್ದರು. 1979ರ ಇಸ್ಲಾಮಿಕ್ ಕ್ರಾಂತಿಯ ಮೊದಲಿನಿಂದಲೂ ಇರಾನಿನ ವ್ಯವಹಾರಗಳಲ್ಲಿ ಪ್ರತಿಯೊಂದು ಮುಖ್ಯ ಬೆಳವಣಿಗೆಯೊಂದಿಗೂ ಅವರು ಗುರುತಿಸಿಕೊಂಡಿದ್ದರು.
ಅಮೆರಿಕ ಬೆಂಬಲಿತ ದೊರೆ ಶಾ ಅವರ ಉಚ್ಚಾಟನೆಯ ನಂತರ ಇರಾನ್ ಸಾಕ್ಷಿಯಾಗಿದ್ದ ಪ್ರಕ್ಷುಬ್ಧ ವರ್ಷಗಳಲ್ಲಿ ಅವರು ಸ್ಥಿರತೆಯನ್ನು ಕಾಯ್ದುಕೊಂಡಿದ್ದ ನಾಯಕರಾಗಿದ್ದರು.
ರಫ್ಸಂಜಾನಿಯವರ ರಾಜಕೀಯ ಮಿತ್ರ ಹಸನ್ ರೂಹಾನಿ ಅವರು 2013ರಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಷ್ಟ್ರದ ಅಧ್ಯಕ್ಷರಾಗಿ ಆಯ್ಕಯಾದ ಬಳಿಕ ಅಮೆರಿಕದ ಜೊತೆ ನೇರ ಪರಮಾಣು ಮಾತುಕತೆಗೆ ಒತ್ತು ಸೇರಿದಂತೆ ಸುಧಾರಣಾ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.





