ಪಡುಬಿದ್ರಿ : ಉಚಿತ ಕಣ್ಣಿನ ತಪಾಸಣಾ ಶಿಬಿರ
ಪಡುಬಿದ್ರಿ, ಜ. 8 : ಮನುಷ್ಯ ದೇಹದ ಪ್ರಧಾನ ಅಂಗವಾಗಿರುವ ಕಣ್ಣಿನ ತಪಾಸಣೆಗಾಗಿ ಆಯೋಜಿಸಲಾಗುವ ಉಚಿತ ಶಿಬಿರಗಳು ಶ್ಲಾಘನೀಯವಾದುದು ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಹಾಗೂ ಮ್ಯಾಕ್ಸಿಕ್ಯಾಬ್ ಎಸೋಸಿಯೇಶನ್ ಅಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಎಸೋಸಿಯೇಶನ್‌ನ ಪಡುಬಿದ್ರಿ ಘಟಕದ ರಜತ ಮಹೋತ್ಸವ ಸಂದರ್ಭದಲ್ಲಿ ನಡೆಸಲಾಗುತ್ತಿರುವ ಸಂಚಾರಿ ಸಂಭ್ರಮದಲ್ಲಿ ಶನಿವಾರದಂದು ಲಯನ್ಸ್, ಲಯನೆಸ್ ಕ್ಲಬ್ ಬಾರ್ಕೂರು, ಹಾಗೂ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆ ಕೋಟಗಳ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಪ್ರಾಥಮಿಕ ಕೇಂದ್ರದಲ್ಲಿ ನಡೆಸಲಾದ ಸಾರ್ವಜನಿಕ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರ ರಾಜ್ಯ ಲಾರಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಗಾವಳಿ, ಚಾರ್ಮಕ್ಕಿ ಕಣ್ಣಿನ ಆಸ್ಪತ್ರೆಯ ವೈದ್ಯೆ ಡಾ ರೂಪಶ್ರೀ, ಅಂಚನ್ ಆಯುರ್ವೇದಿಕ್‌ನ ಡಾ ಎನ್. ಟಿ. ಅಂಚನ್, ಮಾಜಿ ಜಿಲ್ಲಾ ಪರಿಷತ್ ಸದಸ್ಯ ಪಿ. ರವೀಂದ್ರನಾಥ ಜಿ. ಹೆಗ್ಡೆ ಮಾತಾಡಿದರು.
ವೇದಿಕೆಯಲ್ಲಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ ಬಿ.ಬಿ. ರಾವ್, ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಗುತ್ತಿನಾರ್ ವಿಶುಕುಮಾರ್ ಶೆಟ್ಟಿಬಾಲ್, ಉದ್ಯಮಿ ಶಬ್ಬೀರ್ ಹುಸೈನ್, ಪಡುಬಿದ್ರಿ ಘಟಕದ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ಆನಂದ ಎಂ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರವಿ ಶೆಟ್ಟಿ ಸ್ವಾಗತಿಸಿದರು. ವೈ. ದಿನೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮಹಮ್ಮದ್ ಕೌಸರ್ ವಂದಿಸಿದರು.







