ಕೊಡಗಿನಲ್ಲಿ ಜೀತಪದ್ಧತಿ ಜೀವಂತ: ಗಣೇಶ್ ಆರೋಪ

ಸಿದ್ದಾಪುರ, ಜ.8: ಕೊಡಗು ಜಿಲ್ಲೆಯಲ್ಲಿ ಜೀತಪದ್ಧತಿ ಜೀವಂತವಾಗಿದ್ದು, ಹಲವಾರು ಘಟನೆಗಳು ನಡೆದರೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಆದಿವಾಸಿ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ವೈ.ಕೆ. ಗಣೇಶ್ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದಾಪುರದ ಸರಕಾರಿ ಆಸ್ಪತ್ರೆಯ ಶವಾಗಾರದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೃತನ ಕುಟುಂಬ ಜೀತ ಪದ್ಧತಿಯಲ್ಲಿ ಇಲ್ಲದಿದ್ದರೆ ಮೃತ ನಂಜನ ಪತ್ನಿ ಮತ್ತು ಮಕ್ಕಳನ್ನು ಕರೆತರಲು ಪೊಲೀಸರು ತಮ್ಮ ವಾಹನದಲ್ಲಿ ತೂಚಮನಕೇರಿ ಗ್ರಾಮಕ್ಕೆ ತೆರಳಿ ಅವರನ್ನು ಕರೆತರುವ ಆವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ದಿಡ್ಡಳ್ಳಿ ನಿರಾಶ್ರಿತರ ಪ್ರದೇಶದಲ್ಲಿ ಮೃತಪಟ್ಟ ನಂಜನ ಸಾವಿನ ಪ್ರಕರಣ ಶೀಘ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ ಅವರು, ಜಿಲ್ಲೆಯಲ್ಲಿ ಜೀತ ಪದ್ಧತಿ ಜೀವಂತವಾಗಿರುವುದಕ್ಕೆ ಕಣ್ಣಂಗಾಲ ಗ್ರಾಮ ಪಂಚಾಯತ್ ಅಧ್ಯಕ್ಷೆಯನ್ನು ದುಡಿಸಿಕೊಂಡ ಘಟನೆಯೇ ಸಾಕ್ಷಿ ಎಂದರು.
ಬಾಲ ಕಾರ್ಮಿಕ ಹಾಗೂ ಜೀತಪದ್ಧತಿ ಜೀವಂತವಾಗಿದ್ದರೂ ಅಧಿಕಾರಿಗಳು ಯಾವುದೇ ತನಿಖೆ ನಡೆಸುತ್ತಿಲ್ಲ. ಶಾಲೆಗೆ ತೆರಳಿ ವಿದ್ಯಾಭ್ಯಾಸ ಪಡೆಯಬೇಕಾಗಿರುವ ವಿದ್ಯಾರ್ಥಿಗಳನ್ನು ಕಾಫಿ ತೋಟಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಆದಿವಾಸಿಗಳು ಜೀತ ಮುಕ್ತಿಗಾಗಿ ಪ್ರಯತ್ನ ಪಟ್ಟರೆ, ಅಂತವರ ವಿರುದ್ಧ ಸಾಲ ಪಡೆದಿರುವ ಆರೋಪ ಹೊರಿಸಿ ಮತ್ತಷ್ಟು ದುಡಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ನಿರಪರಾಧಿ ಆದಿವಾಸಿಗಳ ಮೇಲೆ ಹಲವು ಪ್ರಕರಣಗಳನ್ನೂ ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದರು.
ಆದಿವಾಸಿಗಳಿಗೆ ಸಿಗುವ ಸೌಲಭ್ಯಗಳು ಇತರರ ಪಾಲಾಗುತ್ತಿದ್ದು, ಆದಿವಾಸಿಗಳಿಗೆ ನ್ಯಾಯ ಸಿಗುತ್ತಿಲ್ಲ. ಕೂಡಲೇ ಸರಕಾರ ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಬಗೆ ಹರಿಸಬೇಕೆಂದು ಒತ್ತಾಯಿಸಿದರು.







