‘ತುಳು ಬಾಸೆದ ಒರಿಪು ಬೊಕ್ಕ ಬುಲೆಚಿಲ್‌ಡ್ ಮಾಧ್ಯಮದ ಪಾಲ್’ ಗೋಷ್ಠಿ

ಸುರತ್ಕಲ್, ಜ.8: 40 ವರ್ಷಗಳಿಂದ ದೇಶದ ಶೇಖಡಾ 95.5 ಜನರ ಮಾಧ್ಯಮವಾಗಿರುವ ಆಕಾಶವಾಣಿ ಪ್ರತಿ ದಿನ 35 ಲಕ್ಷ ಜನರನ್ನು ತಲುಪುತ್ತಿದೆ. ಅಲ್ಲದೆ, ಆಕಾಶವಾಣಿ ತುಳುವಿಗೆ ಅಪಾರ ಕೊಡುಗೆಗಳನ್ನು ನೀಡಿದೆ ಎಂದು ಮಂಗಳೂರು ಆಕಾಶವಾಣಿಯ ನಿರ್ವಾಹಕ ಡಾ.ಸದಾನಂದ ಪೆರ್ಲ ಹೇಳಿದರು.
ಅವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಂಯೋಜನೆಯಲ್ಲಿ ಸುರತ್ಕಲ್ ಬಂಟರ ಸಂಘ ಮತ್ತು ಮಹಿಳಾ ವೇದಿಕೆಯ ಜಂಟಿ ಸಹಕಾರದೊಂದಿಗೆ ಸುರತ್ಕಲ್ ಬಂಟರ ಸಂಘದಲ್ಲಿ ರವಿವಾರ ನಡೆದ ‘ಕುಡ್ಲ ತುಳು ಮಿನದನ’ ಕಾರ್ಯಕ್ರಮದಲ್ಲಿನ ಆಯೋಜಿಸಲಾಗಿದ್ದ ‘ತುಳು ಬಾಸೆದ ಒರಿಪು ಬೊಕ್ಕ ಬುಲೆಚಿಲ್‌ಡ್ ಮಾಧ್ಯಮದ ಪಾಲ್’ ಎನ್ನುವ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಆಕಾಶವಾಣಿಯ ಡಾ.ಸದಾನಂದ ಪೆರ್ಲ ಮಾತನಾಡಿ, ತುಳು ಬಾಷೆಗೆ ಆದ್ಯತೆ ನೀಡುವ ಮೂಲಕ ದೇಶದ ಒಟ್ಟು 146 ವಿವಿಧ ಬಾಷೆಯಲ್ಲಿ ತುಳುವಿಗೂ ಮಾನ್ಯತೆಯಂತೆ ಆಕಾಶವಾಣಿ ಕಳೆದ 40 ವರ್ಷದಿಂದ ತುಳು ಬಾಷೆ-ಸಂಸ್ಕೃತಿ-ಪರಂಪರೆಯನ್ನು ಬೆಳೆಸುತ್ತಿದೆ. ಮಾಹಿತಿ, ಶಿಕ್ಷಣ ಸಾಹಿತ್ಯ, ಸಾಂಸ್ಕೃತಿಕತೆಯಿಂದ ಧ್ವನಿಯ ರೂಪದಲ್ಲಿ ಇಂಪಾಗಿಸಿದೆ ಎಂದರು.
ತುಳು ಭಾಷೆ ಸರಳವಾದ ಭಾಷೆಯಾಗಿದ್ದು, ಅದನ್ನು ತುಳು ಲಿಪಿಯಲ್ಲಿ ಬಂಧಿಸುವ ಒತ್ತಡ ಬೇಡ. ತುಳುನಾಡಿನ ಸಿರಿ, ಕೋಟಿ ಚೆನ್ನಯ್ಯನಂತಹ ಪಾಡ್ದನ ಕಾಲದ ಸಾಹಿತ್ಯವು ಯಾವುದೇ ಬರವಣಿಗೆ ಇಲ್ಲದೆ ಪರಂಪರೆಯಂತೆ ಇಂದಿಗೂ ಪ್ರಸ್ತುತವಾಗಿದೆ. ಬರವಣಿಗೆಯನ್ನು ಕಾಣದ ಆ ಕಾಲದಲ್ಲಿನ ಲಿಪಿಯ ಮೂಲ ಹುಡುಕಾಟದ ಅಗತ್ಯವಿದೆಯೇ ತುಳು ನಾವು ನೀವು ಆಡುವ ಸುಂದರ ಭಾಷೆಯಾಗಿಯೇ ಉಳಿಯಲಿ ಎಂಟನೆ ಪರಿಚ್ಚೇದಕ್ಕೆ ಸೇರಿದಲ್ಲಿ ಇನ್ನಷ್ಟು ಗಟ್ಟಿತನ ತುಳುವಿಗೆ ಸಿಗಬಹುದು ಎಂದು ಉದಯವಾಣಿಯ ಮಂಗಳೂರು ಚೀಪ್‌ಬ್ಯೂರೋ ಮನೋಹರ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ದೃಶ್ಯ ಮಾದ್ಯಮದ ಎಂ.ಎಸ್.ಕೋಟ್ಯಾನ್ ಮಾತನಾಡಿ, ಮಂಗಳೂರಿನಲ್ಲಿ ತುಳುವಿಗೆ ವಿಶೇಷ ಚಾಲನೆ ಸಿಕ್ಕಿದ್ದು ದೃಶ್ಯ ಮಾದ್ಯಮದಿಂದ ಸಾಧ್ಯವಾಗಿದೆ ಎನ್ನುವುದಕ್ಕೆ ಮಂಗಳೂರಿನ ನಮ್ಮ ಕುಡ್ಲ, ನಮ್ಮ ಟಿವಿ, ಉಳ್ಳಾಲದ ಪೊಸಕುರಲ್ ನಂತಹ ಖಾಸಗಿ ಛಾನೆಲ್‌ಗಳು ಇಂದಿಗೂ ತುಳುವನ್ನೇ ಪಸರಿಸುತ್ತಿದೆ. ಇಲ್ಲಿನ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಸುವಲ್ಲಿ ಸಹಕರಿಸುತ್ತಿದೆ ಎಂದು ಹೇಳಿದರು.
ಗೋಷ್ಠಿಯ ಅಧ್ಯಕ್ಷತೆ ಮಾತನಾಡಿದ ಹಿರಿಯ ಪತ್ರಕರ್ತ ಈಶ್ವರ್ ದೈತೋಟ, ತುಳುನಾಡಿನಿಂದ ವಲಸೆ ಹೋದ ತುಳುವರು ತುಳುವನ್ನು ಅಕ್ಕಪಕ್ಕದಲ್ಲಿ ಬೆಳೆಸಲಿಲ್ಲ ಎಂಬ ಖೇಧವಿದೆ. ತುಳು ಬಾಷೆ ಬೆಳವಣಿಗೆಗೆ ಕನಿಷ್ಠ ಜಿಲ್ಲೆಯಿಂದ ರಾಜಧಾನಿಯವರೆಗೆ ಅಥವ ಹೊರಬಾಗದ ರಾಷ್ಟ್ರಮಟ್ಟದಲ್ಲಿ ಅಕಾಡೆಮಿಗಳ ಮೂಲಕ ಕಾರ್ಯಕ್ರಮಗಳನ್ನು ನೀಡುವ ಅಗತ್ಯವಿದೆ ಎಂದರು.
ಲೋಕಯ್ಯ ಶೆಟ್ಟಿ ಸ್ವಾಗತಿಸಿದರು. ಜಯಶೀಲ ವಂದಿಸಿದರು. ನರೇಶ್‌ಕುಮಾರ್ ಸಸಿಹಿತ್ಲು ನಿರೂಪಿಸಿದರು.







