ಸಾನಿಯಾ ಮಿರ್ಝಾ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದರು..!
ಡಿಡಿ ಸಹ್ಯಾದ್ರಿ ಎಡವಟ್ಟು
![ಸಾನಿಯಾ ಮಿರ್ಝಾ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದರು..! ಸಾನಿಯಾ ಮಿರ್ಝಾ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದರು..!](https://www.varthabharati.in/sites/default/files/images/articles/2017/01/9/sania-mirza-759.jpg)
ಹೊಸದಿಲ್ಲಿ , ಜ.9: ಭಾರತದ ಸಾನಿಯಾ ಮಿರ್ಜಾ ಬ್ರಿಸ್ಬೇನ್ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲಿ ಶನಿವಾರ ಈ ಋತುವಿನ ಮೊದಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಆದರೆ ದೂರದರ್ಶನ ನ್ಯೂಸ್ ಪ್ರಕಾರ ಸಾನಿಯಾ ಮಿರ್ಝಾ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ದೂರದರ್ಶನ ಸಹ್ಯಾದ್ರಿ ಮಧ್ಯಾಹ್ನ 2:30ರಿಂದ 3:00 ಗಂಟೆಯ ಅವಧಿಯಲ್ಲಿ ಪ್ರಸಾರ ಮಾಡಿದ ಸುದ್ದಿಯ ಟಿಕ್ಕರ್ ನಲ್ಲಿ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಬ್ರಿಸ್ಬೇನ್ ನಲ್ಲಿ "ಬ್ಯಾಡ್ಮಿಂಟನ್ " ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ ಎಂದು ಇತ್ತು. ಸುದ್ದಿ ವಾಚಕರು ಇದೇ ರೀತಿ ಸುದ್ದಿ ಓದಿದರು. ಅವರಿಗೆ ತಪ್ಪಿನ ಅರಿವಾಗಲಿಲ್ಲ. ಇದರಿಂದ ಅಚ್ಚರಿಗೊಂಡ ಸಾನಿಯಾ ಅವರ ಅಭಿಮಾನಿಗಳು ಪತ್ರಿಕಾ ಕಚೇರಿಗಳಿಗೆ ಮಾಹಿತಿ ನೀಡಿದರು.ಅರ್ಧ ಗಂಟೆ ತನಕ ಡಿಡಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲಿಲ್ಲ ಎಂದು ಸಾನಿಯಾ ಅಭಿಮಾನಿಗಳು ದೂರಿದ್ದಾರೆ.
ಬ್ರಿಸ್ಬೇನ್ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಸಾನಿಯಾ ಹಾಗೂ ಅಮೆರಿಕಾದ ಬೆಥನಿ ಮಾಟೆಕ್ ಸ್ಯಾಂಡ್ಸ್ ಜೋಡಿ 6–2, 6–3ರಲ್ಲಿ ರಷ್ಯಾದ ಎರಡನೇ ಶ್ರೇಯಾಂಕದ ಏಕ್ತರಿನಾ ಮಕರೋವಾ ಮತ್ತು ಎಲೆನಾ ವೆಸ್ನಿನಾ ಅವರನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಸಾನಿಯಾ 91 ವಾರ ಡಬ್ಲ್ಯುಟಿಎ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದ್ದರು.ಆದರೆ ಅವರು ಬ್ರಿಸ್ಬೇನ್ ಪ್ರಶಸ್ತಿ ಜಯಿಸಿದರೂ, ವಿಶ್ವ ರ್ಯಾಂಕಿಂಗ್ನಲ್ಲಿ ಅವರು ಶನಿವಾರ ಮೊದಲ ಸ್ಥಾನವನ್ನು ಕಳೆದುಕೊಂಡರು.ಅವರ ಡಬಲ್ಸ್ ಜತೆಗಾರ್ತಿ ಬೆಥನಿ ಅಗ್ರ ರ್ಯಾಂಕಿಂಗ್ ಗೌರವಕ್ಕೆ ಪಾತ್ರರಾದರು.