ನೋಟು ರದ್ಧತಿಯ ಪರಿಣಾಮ : ಉದ್ಯೋಗ, ಆದಾಯದಲ್ಲಿ ಭಾರೀ ಇಳಿಕೆ
ಆತಂಕಕಾರಿ ಅಂಕಿ ಅಂಶ ಬಿಡುಗಡೆ ಮಾಡಿದ ಉತ್ಪಾದಕರ ಸಂಘಟನೆ

ಚೆನ್ನೈ, ಜ.9: ಕೇಂದ್ರ ಸರಕಾರ ನೋಟು ಅಮಾನ್ಯೀಕರಣಗೊಳಿಸಿದ ನಂತರದ 34 ದಿನಗಳಲ್ಲಿ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೇ.35ರಷ್ಟು ಮಂದಿ ಕೆಲಸ ಕಳೆದುಕೊಂಡಿದ್ದರೆ, ಈ ಉದ್ಯಮಗಳು ಶೇ.50ರಷ್ಟು ಆದಾಯ ಕುಸಿತ ಕಂಡಿವೆಯೆಂದು ಭಾರತೀಯ ಉತ್ಪಾದಕರ ಅತ್ಯಂತ ದೊಡ್ಡ ಸಂಘಟನೆಯಾದ ಆಲ್ ಇಂಡಿಯಾ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಶನ್ ನಡೆಸಿದ ಅಧ್ಯಯನವೊಂದರಿಂದ ತಿಳಿದು ಬಂದಿದೆ.
ಈ ವರ್ಷದ ಮಾರ್ಚ್ 2017ರೊಳಗಾಗಿ ಶೇ.60ರಷ್ಟು ಉದ್ಯೋಗ ನಷ್ಟ ಹಾಗೂ ಶೇ.55ರಷ್ಟು ಆದಾಯ ನಷ್ಟವಾಗಲಿದೆಯೆಂದು ಸಂಘಟನೆ ಅಂದಾಜಿಸಿದೆ. ದೇಶದ ಉತ್ಪಾದನಾ ಹಾಗೂ ರಫ್ತು ಚಟುವಟಿಕೆಗಳಲ್ಲಿ ನಿರತವಾಗಿರುವ 3 ಲಕ್ಷಕ್ಕೂ ಅಧಿಕ ಸಣ್ಣ, ಅತಿಸಣ್ಣ, ಮಧ್ಯಮ ಹಾಗೂ ದೊಡ್ಡ ಕೈಗಾರಿಕೆಗಳನ್ನು ಸಂಘಟನೆ ಪ್ರತಿನಿಧಿಸುತ್ತದೆ.
ಸರಿಸುಮಾರು ಎಲ್ಲಾ ಕೈಗಾರಿಕಾ ಚಟುವಟಿಕೆಗಳು ಬಹುತೇಕ ಬಾಧಿತವಾಗಿದ್ದರೆ, ಸಣ್ಣ ಹಾಗೂ ಅತಿ ಸಣ್ಣ ಉದ್ಯಮಗಳು ತೀವ್ರ ಬಾಧಿತವಾಗಿವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ನೋಟು ರದ್ದತಿಯ ನಂತರ ಸಂಘಟನೆ ನಡೆಸಿದ ಮೂರನೆ ಅಧ್ಯಯನ ಇದಾಗಿದ್ದರೆ, ನಾಲ್ಕನೆ ಅಧ್ಯಯನವನ್ನು ಅದು ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಿದೆ.
ಈ ಅಧ್ಯಯನದ ವಿವರಗಳು ಇಂತಿವೆ.
*ಅಮಾನ್ಯೀಕರಣದಿಂದಾಗಿ ರಸ್ತೆಗಳು ಮುಂತಾದ ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮಧ್ಯಮ ಮತ್ತು ಭಾರೀ ಕೈಗಾರಿಕೆಗಳು ಶೇ.35ರಷ್ಟು ಉದ್ಯೋಗ ಕಡಿತ ಹಾಗೂ ಶೇ.45ರಷ್ಟು ಆದಾಯ ಖೋತಾ ಕಂಡಿವೆ. ಈ ಮಾರ್ಚ್ ತಿಂಗಳೊಳಗಾಗಿ ಉದ್ಯೋಗ ಹಾಗೂ ಆದಾಯ ಶೇ.40ರಷ್ಟು ಕುಸಿಯಲಿದೆ.
* ರಫ್ತು ಆಧರಿತ ಚಟುವಟಿಕೆಗಳನ್ನು ನಡೆಸುವ ವಿದೇಶಿ ಕಂಪೆನಿಗಳು ಸೇರಿದಂತೆ ಬೃಹತ್ ಹಾಗೂ ಮಧ್ಯಮ ಗಾತ್ರದ ಕಂಪೆನಿಗಳು ಶೇ.30ರಷ್ಟು ಉದ್ಯೋಗ ಕಡಿತಗೊಳಿಸಿದ್ದರೆ, ಶೇ.40ರಷ್ಟು ಆದಾಯ ಕುಸಿತ ಕಂಡಿದೆ. ಇದು ಈ ಮಾರ್ಚ್ ಒಳಗಾಗಿ ಕ್ರಮವಾಗಿ ಶೇ.35 ಹಾಗೂ ಶೇ.45ಕ್ಕೆ ಏರಲಿದೆ.
* ಉತ್ಪಾದನಾ ರಂಗದಲ್ಲಿ ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳು ನೋಟು ಅಮಾನ್ಯೀಕರಣದ ಪ್ರಥಮ 34 ದಿನಗಳಲ್ಲಿ ಕನಿಷ್ಠ ಉದ್ಯೋಗ ನಷ್ಟ (ಶೇ.5) ಕಂಡರೆ ಈ ರಂಗ ಶೇ.20ರಷ್ಟು ಆದಾಯ ಕುಸಿತ ಕಂಡಿದೆ. ಮಾರ್ಚ್ ಒಳಗಾಗಿ ಆದಾಯ ಇನ್ನೂ ಶೇ.15ರಷ್ಟು ಕುಸಿತಗೊಳ್ಳಲಿದೆ ಎಂದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.







