ಸೋಲಾರ್ ಹಗರಣ: ಮುಂದುವರಿದ ಮಾಜಿ ಮುಖ್ಯಮಂತ್ರಿಯ ಸಂಕಷ್ಟ

ಬೆಂಗಳೂರು, ಜ.9: ಸೋಲಾರ್ ಹಗರಣದಲ್ಲಿ ಸಿಲುಕಿರುವ ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಸಂಕಷ್ಟ ಮುಂದುವರಿದಿದೆ.
ಪ್ರಕರಣಕ್ಕೆ ಸಂಬಂಧಿಸಿ ಇಂದು ಬೆಂಗಳೂರಿನ ಸಿಟಿ ಸಿವಿಲ್ ಆ್ಯಂಡ್ ಸೆಷನ್ಸ್ ನ್ಯಾಯಾಲಯದ ವಿಚಾರಣೆಗೆ ಉಮ್ಮನ್ ಚಾಂಡಿ ಹಾಜರಾಗಿದ್ದರು. ಆದರೆ ಈ ಹಿಂದಿನ ಸಮನ್ಸ್ ಪಡೆದಿದ್ದ ವಿನಾಯಿತಿಗೂ ಇಂದು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದ್ದ ಪ್ರಮಾಣಪತ್ರಕ್ಕೂ ವ್ಯತ್ಯಾಸ ಕಂಡಬಂದಿತ್ತು. ಈ ಹಿನ್ನಲೆ ಚಾಂಡಿಯನ್ನು ಕ್ರಾಸ್ ಎಕ್ಸಾಮಿನೇಶನ್ ಮಾಡಲು ದೂರುದಾರರ ಪರ ವಕೀಲರು ಕಾಲವಕಾಶ ಕೇಳಿದರು. ಅದರಂತೆ ಕಾಲಾವಕಾಶ ನೀಡಿದ ಕೋರ್ಟ್ ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿತು.
ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರು ಸೆಷನ್ಸ್ ಕೋರ್ಟ್ ಚಾಂಡಿ ಸೇರಿದಂತೆ ಪ್ರಮುಖ 6 ಆರೋಪಿಗಳಿಗೆ ಚಾಟಿ ಬೀಸಿ, ಬೆಂಗಳೂರು ಮೂಲದ ಉದ್ಯಮಿ ಎಂ.ಕೆ.ಕುರುವಿಲ್ಲಾರಿಗೆ 1.6 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಅಲ್ಲದೆ, 6 ತಿಂಗಳ ಒಳಗಾಗಿ ಶೇ.12ರಷ್ಟು ಬಡ್ಡಿ ದರದಲ್ಲಿ ಹಣವನ್ನು ಹಿಂದಿರುಗಿಸಲು ಹೇಳಿತ್ತು.
ಈ ಹಿಂದೆ ಕುರುವಿಲ್ಲಾ ಮತ್ತು ಮತ್ತು ಉಮ್ಮನ್ ಚಾಂಡಿ ಸಾಕಷ್ಟು ಆತ್ಮೀಯರಾಗಿದ್ದರು. ಇದೇ ವೇಳೆ ಸೋಲಾರ್ ಯೋಜನೆ ಜಾರಿಗಾಗಿ ಕಂಪನಿಯೊಂದಕ್ಕೆ ಸರಕಾರದ ಪರವಾಗಿ ಕುರುವಿಲ್ಲಾ ಅವರು 1,60,85,700 ರೂಪಾಯಿ ಬಂಡವಾಳ ಹೂಡಿದ್ದರು. ಆದರೆ ಈ ಯೋಜನೆಯಲ್ಲಿ ಹಗರಣ ಸದ್ದು ಮಾಡತೊಡಗಿತು. ಹೀಗಾಗಿ ಬಂಡವಾಳ ವಾಪಸ್ ಮಾಡುವಂತೆ ಕುರುವಿಲ್ಲಾ ಆಗ್ರಹಿಸಿದರು. ಆದರೆ ಉಮ್ಮನ್ ಚಾಂಡಿ ಇದಕ್ಕೆ ಪೂರಕಾಗಿ ಸ್ಪಂದಿಸಲಿಲ್ಲ. ಈ ಹಿನ್ನೆಲೆಯಲ್ಲಿ ಕುರುವಿಲ್ಲಾ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ನ್ಯಾಯಾಲಯವು ಎಂ.ಕೆ.ಕುರುವಿಲ್ಲ ಪರವಾಗಿ ತೀರ್ಪು ನೀಡಿತು. ತೀರ್ಪಿನಿಂದ ಅಸಮಾಧಾನಗೊಂಡ ಉಮ್ಮನ್ ಚಾಂಡಿ ತೀರ್ಪು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದೀಗ ಅದರ ವಿಚಾರಣೆ ನಡೆಯುತ್ತಿದೆ.







