ಸೆಹ್ವಾಗ್ ಟ್ವೀಟ್ ಅಂದರೆ ತಮಾಷೆಯಲ್ಲ. ಕಳೆದ 6 ತಿಂಗಳಲ್ಲಿ ಅವರ ಸಂಪಾದನೆ ಎಷ್ಟು ಗೊತ್ತೇ ?

ಹೊಸದಿಲ್ಲಿ, ಜ.9: 'ನಜಫ್ ಘಡ್ ಕಾ ನವಾಬ್', 'ಮುಲ್ತಾನ್ ಕಾ ಸುಲ್ತಾನ್' ಮುಂತಾದ ಉಪನಾಮೆಗಳಿಂದ ಖ್ಯಾತರಾದ ಒಂದೊಮ್ಮೆ ಭಾರತೀಯ ತಂಡದ ಸ್ಫೋಟಕ ಬ್ಯಾಟ್ಸ್ ಮೆನ್ ಆಗಿದ್ದ ವೀರೇಂದರ್ ಸೆಹ್ವಾಗ್ ಇದೀಗ ತಮ್ಮ ಟ್ವೀಟ್ ಗಳಿಂದಾಗಿಯೂ ಸಾಕಷ್ಟು ಚರ್ಚೆಯ ವಸ್ತುವಾಗಿ ಬಿಟ್ಟಿದ್ದಾರೆ. ತಮ್ಮ ಬ್ಯಾಟಿಂಗಿನಿಂದ ಜನರನ್ನು ರಂಜಿಸಿದ ಹಾಗೆ ಅವರು ತಮ್ಮ ಟ್ವೀಟ್ ಗಳಿಂದಲೂ ಜನರನ್ನು ರಂಜಿಸುತ್ತಿದ್ದು, ಇದರಿಂದಾಗಿ ಅವರ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಕೂಡ ಸಾಕಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲ ಇದೀಗ ಅವರು ತಮ್ಮ ಟ್ವೀಟುಗಳಿಂದಲೂ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರೇ ಹೇಳಿದಂತೆ, ಕಳೆದ ಆರು ತಿಂಗಳುಗಳಿಂದ ಅವರು ತಮ್ಮ ಟ್ವೀಟ್ ಗಳ ಮುಖಾಂತರ ಸುಮಾರು ರೂ.30 ಲಕ್ಷ ಸಂಪಾದಿಸಿದ್ದಾರೆ. ಸೆಹ್ವಾಗ್ ಅವರ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ 80 ಲಕ್ಷ ದಾಟಿದ್ದು, ಅವರು ತಾವು ಕ್ರಿಕೆಟ್ ಆಡುತ್ತಿದ್ದಾಗ ಡ್ರೆಸ್ಸಿಂಗ್ ರೂಮಿನಲ್ಲಿ ಹಾರಿಸುತ್ತಿದ್ದ ಹಾಸ್ಯ ಚಟಾಕಿಗಳ ಬಗ್ಗೆ, ಮಾಡುತ್ತಿದ್ದ ಟ್ವೀಟುಗಳು ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿವೆ. ಮಾತ್ರವಲ್ಲದೆ, ಸಾವಿರಾರು ಮಂದಿ ಅವರ ಟ್ವೀಟುಗಳನ್ನು ರಿಟ್ವೀಟ್ ಕೂಡ ಮಾಡುತ್ತಾರೆ.
ಇದನೇ ಬಂಡವಾಳವಾಗಿಸಿಕೊಂಡ ಕೆಲ ಪ್ರಮುಖ ಬ್ರ್ಯಾಂಡುಗಳು ಅವರ ಟ್ವೀಟುಗಳನ್ನು ಸ್ಪಾನ್ಸರ್ ಮಾಡಲು ಮುಂದೆ ಬಂದ ಪರಿಣಾಮ ಅವರಿಗೆ ತಮ್ಮ ಟ್ವೀಟ್ ಗಳಿಂದ ಗಣನೀಯ ಆದಾಯ ಬರಲಾರಂಭಿಸಿದೆ.
ತರುವಾಯ ಕೇವಲ ಟ್ವಿಟ್ಟರಿಗಷ್ಟೇ ತಮ್ಮನ್ನು ಸೀಮಿತಗೊಳಿಸದ ಸೆಹ್ವಾಗ್ ಯುಟ್ಯೂಬ್ ನಲ್ಲಿ 'ವೀರು ಕೆ ಫಂಡೆ' ಎಂಬ ವೆಬ್ ಸರಣಿಯನ್ನು ಆರಂಭಿಸಿದ್ದು, ಅದರಲ್ಲಿ ಅತ್ತೆಯನ್ನು ನಿಭಾಯಿಸುವ ಬಗೆ, ಆದಾಯ ತೆರಿಗೆ ಉಳಿಸುವ ವಿಧಾನ, ವಯಸ್ಕರಾದ ಮೇಲೆ ಇಂಗ್ಲಿಷ್ ಕಲಿಯುವ ಪರಿ ಹೇಗೆ ಎಂಬ ಬಗ್ಗೆ ಹಾಸ್ಯ ಮಿಶ್ರಿತವಾಗಿ ತಿಳಿಸುತ್ತಿದ್ದು, ಇದು ಕೂಡ ಬಹಳಷ್ಟು ಜನಪ್ರಿಯವಾಗಿದೆ.







