ಶಿರವಸ್ತ್ರ ಧರಿಸಿದ ಫೋಟೊ: ವಿದ್ಯಾರ್ಥಿನಿಗೆ ನೋಂದಾವಣೆ ನಿರಾಕರಿಸಿದ ಕೊಚ್ಚಿನ್ ಮೆಡಿಕಲ್ ಕೌನ್ಸಿಲ್ !

ವಡುದಲ(ಆಲಪ್ಪುಝ),ಜ.9: ಕಿವಿ,ಕೊರಳನ್ನು ಮುಚ್ಚಿದ ಫೋಟೊ ನೀಡಿದ್ದಕ್ಕಾಗಿ ವಿದ್ಯಾರ್ಥಿನಿಯೊಬ್ಬಳಿಗೆ ಟ್ರಾವಂಕೂರ್ ಕೊಚ್ಚಿನ್ ಮೆಡಿಕಲ್ ಕೌನ್ಸಿಲ್(ಬಿಎಚ್‌ಎಂಎಸ್) ನೋಂದಾವಣೆ ನಿಷೇಧಿಸಿದ ಘಟನೆ ನಡೆದಿದೆ. ಅಲಪ್ಪುಝ ಜಿಲ್ಲೆಯ ಆರುಕ್ಕುಟ್ಟಿ ಪಂಚಾಯತ್ ಕುನ್ನಿಲ್ ಆಸಿಯಾ ಇಬ್ರಾಹೀಂ ಅರ್ಜಿಜೊತೆ ಪಾಸ್‌ಪೋರ್ಟ್ ಅಳತೆಯ ಫೋಟೊ ಇರಿಸಿದ್ದರು, ಕಿವಿ,ಕೊರಳು ಕಾಣಿಸುತ್ತಿಲ್ಲ ಎಂದು ನೋಂದಾಯಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಎಂಜಿಆರ್ ಮೆಡಿಕಲ್ ಯುನಿವರ್ಸಿಟಿ ಅಡಿಯಲ್ಲಿ ಬರುವ ಕೋಯಮತ್ತೂರ್ ಮಾರ್ಟಿನ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನಿಂದ 2016 ಮೇಯಲ್ಲಿ ಬಿಎಚ್‌ಎಂಎಸ್ ಇಂಟರ್ನ್‌ಶಿಪ್ ಮಾಡಿದ್ದ ಆಸಿಯಾ, ಕಳೆದ ಸೆಪ್ಟಂಬರ್‌ನಲ್ಲಿ ಟ್ರಾವಂಕೂರ್ ಕೊಚ್ಚಿನ್ ಮೆಡಿಕಲ್ ಕೌನ್ಸಿಲ್‌ನಲ್ಲಿ ನೋಂದಾವಣೆಗಾಗಿ ಅರ್ಜಿ ಸಲ್ಲಿಸಿದ್ದರು. ಇಸ್ಲಾಮಿಕ್ ರೀತಿಯಲ್ಲಿ ವಸ್ತ್ರವಿಧಾನದ ಫೋಟೊ ಬದಲಾಯಿಸಿ ಅರ್ಜಿ ಸಲ್ಲಿಸಬೇಕೆಂದು ಆಸಿಯಾಗೆ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಕಿವಿ, ಕೊರಳು ಕಾಣುವ ಫೋಟೊ ಮಾತ್ರ ಸ್ವೀಕರಿಸಲಾಗುವುದು ಎಂಬ ನಿಲುವಿಗೆ ಅಧಿಕಾರಿಗಳು ಅಂಟಿಕುಳಿತಿದ್ದರೆ, ಕಿವಿ,ಕೊರಳು ಹೊರಗೆ ಕಾಣಿಸುವ ಫೋಟೊ ಬೇಕೆಂದು ಮೆಡಿಕಲ್ ಕೌನ್ಸಿಲ್ ನ ನಿಯಮಗಳಲ್ಲಿಲ್ಲ. ಧರ್ಮ ವಿಶ್ವಾಸಕ್ಕೆ ಸಂಬಂಧಿಸಿದ ವಸ್ತ್ರವಿಧಾನ ತನಗೆ ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕು ಎಂದು ಹೇಳಿದಾಗ ಅಧಿಕಾರಿಗಳು ಆಸಿಯಾರ ಅರ್ಜಿಯನ್ನು ನಿರಾಕರಿಸಿದ್ದರು.
ಆದರೆ ಒಂದು ತಿಂಗಳ ನಂತರ ಹೆಚ್ಚು ಸ್ಪಷ್ಟ ಇರುವ ಫೋಟೊ ಬೇಕೆಂದು ಆಸಿಯಾರಿಗೆ ಪತ್ರ ಬಂತು. ಪತ್ರಕ್ಕೆ ಪ್ರತಿಕ್ರಿಯಿಸಿದ ಆಸಿಯಾ ಸಂಪೂರ್ಣ ಹಿಜಾಬ್ ಧರಿಸಿದ ಫೋಟೊವನ್ನು ಆಸಿಯಾ ಕಳುಹಿಸಿಕೊಟ್ಟಿದ್ದರು. ಆದರೆ ಈವರೆಗೂ ಆಸಿಯಾರನ್ನು ಮೆಡಿಕಲ್ ಕೌನ್ಸಿಲ್ ನೋಂದಾಯಿಸಿಕೊಂಡಿಲ್ಲ. ಸಂವಿಧಾನ ಪ್ರಜೆಗಳಿಗೆ ನೀಡಿದ ಧಾರ್ಮಿಕ ಸ್ವಾತಂತ್ರ್ಯವನ್ನು ತಿರಸ್ಕರಿಸಿ ಕಾನೂನುಗಳನ್ನು ದುರ್ವ್ಯಾಖ್ಯಾನಿಸಿ ಅಧಿಕಾರಿಗಳು ತನ್ನ ಮೆಡಿಕಲ್ ನೋಂದಾವಣೆಗೆ ತಡಮಾಡುತ್ತಿದ್ದಾರೆ ಎಂದು ಆಸಿಯಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರಿಂದ ಮೆಡಿಕಲ್ ಕೌನ್ಸಿಲ್ ಅಧಿಕಾರಿಗಳ ಬೇಜವಾಬ್ದಾರಿ ಬಹಿರಂಗವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಬಂದ ಮೇಲೆ ಮೆಡಿಕಲ್ ಕೌನ್ಸಿಲ್ ಅಧಿಕಾರಿಗಳ ನಿಲುವನ್ನು ಪ್ರತಿಭಟಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಕಡೆಗಳಿಂದ ಪ್ರತಿಭಟನೆ ವ್ಯಕ್ತವಾಗಿವೆ. ಇದನ್ನು ಕಂಡು ಟ್ರಾವಂಕೂರ್ ಕೊಚ್ಚಿನ್ ಮೆಡಿಕಲ್ ಕೌನ್ಸಿಲ್ ಆಸಿಯಾರಿಗೆ ನೋಂದಾವಣೆ ಪ್ರಮಾಣ ಪತ್ರ ನೀಡಲು ನಿರ್ಧರಿಸಿದೆ. ಜೊತೆಗೆ, ಸೂಕ್ಷ್ಮ ಪರಿಶೀಲನೆ ಬಳಿಕ ಪ್ರಮಾಣ ಪತ್ರ ನೀಡುತ್ತೇವೆ. ಮುಂದೆ ಏನಾದರೂ ಅಡಚಣೆಯಾದರೆ ಪುನಃ ಅರ್ಜಿ ಸಲ್ಲಿಸಬೇಕಾದೀತು ಎಂದು ಕೊಚ್ಚಿನ್ ಮೆಡಿಕಲ್ ಕೌನ್ಸಿಲ್ ಅಧಿಕಾರಿಗಳು ಹೇಳಿದ್ದಾರೆಂದು ವರದಿಯಾಗಿದೆ.







