ಇದು ಟೀ ಮಾರುವ ಕೇಸಲ್ಲ. ದೇಶವನ್ನೇ ಮಾರುವ ಕೇಸು

# ಜನರಿಗೆ ನಾನು ನಿಮ್ಮ ಪ್ರಧಾನ ಸೇವಕ ಎನ್ನುವ ಮೋದಿ ಉದ್ಯಮಿಗಳ ಪಾಲಿನ ಪರಮೋಚ್ಛ ಸೇವಕ
# ನಾಲ್ಕೂವರೆ ಸಾವಿರ ಕೋಟಿ ಕ್ಯಾಶ್ ಸಿಕ್ಕಿದೆ ಎಂದು ಕತೆ ಹೇಳುವ ಇವರೆಂತಹ ದಗಲ್ಬಾಜಿಗಳಿರಬೇಕು ?
# ದೇಶದ್ರೋಹಿಗಳು ಅಂತ ಸರ್ಟಿಫಿಕೇಟ್ ಕೊಡುವವರು ಮೂರು ವರ್ಗದ ಜನ
ಕಾಳಧನಿಕರನ್ನು ಮುಂಡಾಮೋಚಿ ಬಿಡುತ್ತೇನೆ ಅಂತ ಹೊರಟ ಪ್ರಧಾನಿ ನರೇಂದ್ರ ಮೋದಿ ಫೈನಲಿ, ಇಲಿಗಳನ್ನು ಹಿಡಿಯುವುದೇ ನನ್ನ ಗುರಿ. ಯಾಕೆಂದರೆ ಅವು ಬಿಲ ತೋಡುತ್ತವೆ ಎಂದು ಹೇಳುವ ಮೂಲಕ ಇದೇ ಮೊಟ್ಟ ಮೊದಲ ಬಾರಿ ತಮ್ಮ ಕೆಪ್ಯಾಸಿಟಿಯ ಲಿಮಿಟ್ ಎಷ್ಟು ಎಂಬುದನ್ನು ತೋರಿಸಿದರು.
ಮೊದಲನೆಯದಾಗಿ ಈ ದೇಶದ ತೆರಿಗೆ ದುಡ್ಡನ್ನು ಸಾಲದ ರೂಪದಲ್ಲಿ ಎತ್ತಿದ ಕೆಲವೇ ಉದ್ಯಮಿಗಳ ಏಳೂವರೆ ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲವನ್ನು ಯಾವ ನಾಚಿಕೆ, ಮಾನ ಮರ್ಯಾದೆ ಇಲ್ಲದೆ ಮನ್ನಾ ಮಾಡಿದ ಕೇಂದ್ರ ಸರಕಾರಕ್ಕೆ ಕನಿಷ್ಠ ಪಕ್ಷ ಇದರ ಅರ್ಧದಷ್ಟಾದರೂ ಕಾಳಧನವನ್ನು ಹಿಡಿಯುವ ಲೆಕ್ಕಾಚಾರ ಇರಬೇಕಿತ್ತು. ಆದರೆ ಇವರಿಗೆ ಕನಿಷ್ಠ ಪಕ್ಷ ಆ ಲೆಕ್ಕಾಚಾರವೂ ಇರಲಿಲ್ಲ ಅನ್ನುವುದರ ಅರ್ಥ, ಮೋದಿ ಅವರು ಈ ಕ್ರಮವನ್ನು ಕೈಗೊಳ್ಳುವ ಮುನ್ನ ತಮ್ಮ ಸುತ್ತ ನೆರೆದ ಉದ್ಯಮಿಗಳ ಮಾತು ಕೇಳಿದರೇ ವಿನಾ ನಿಜವಾಗಿಯೂ ಅರ್ಥಶಾಸ್ತ್ರವನ್ನು ಬಲ್ಲವರ ಬಳಿ ಚರ್ಚಿಸಲೂ ಇಲ್ಲ. ಚರ್ಚಿಸಿದ್ದರೆ ಈ ದೇಶದ ಜನಸಾಮಾನ್ಯರು ಪೈಸೆ ಪೈಸೆಗೂ ಲಾಟರಿ ಹೊಡೆಯುವ ಸ್ಥಿತಿ ಬರುತ್ತಿರಲಿಲ್ಲ.
ಅಂದ ಹಾಗೆ ಇಡಿ ಎಪಿಸೋಡಿನಲ್ಲಿ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಅರ್ಥವಾದವು. ಮೊದಲನೆಯದಾಗಿ ನರೇಂದ್ರ ಮೋದಿ ಅವರೇ ಉದ್ಯಮಿಗಳ ಕನಸಿನ ಬೀಜ. ಆ ಬೀಜವನ್ನು ಬಿತ್ತಲು ಅದಾಗಲೇ ಬಿತ್ತನೆಯಾಗಿದ್ದ ಅಡ್ವಾಣಿ ಎಂಬ ಮರವನ್ನು ಬುಡಸಮೇತ ಉರುಳಿಸಿದ ಉದ್ಯಮಿಗಳು ಮೋದಿ ಎಂಬ ಬೀಜವನ್ನು ಬಿತ್ತಿದರು. ಹೀಗಾಗಿ ತಮ್ಮನ್ನು ಪ್ರಧಾನಿ ಮಾಡಿದ ಉದ್ಯಮಿಗಳ ವಿಷಯದಲ್ಲಿ ಪ್ರತಿಯೊಂದು ಹೆಜ್ಜೆ ಇಡುವಾಗಲೂ ಮೋದಿ ಕೃತಜ್ಞರಾಗಿರುತ್ತಾರೆ, ಕೃತಜ್ಞರಾಗಿರಲೇಬೇಕು.
ಹೀಗಾಗಿ ನಾನು, ಅವರೆಲ್ಲ ಬಹಳ ಗಂಭೀರವಾಗಿ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ವಾದಿಸುವುದಿಲ್ಲ. ಯಾಕೆಂದರೆ ಅವರು ಈಗಾಗಲೇ ತಮಗೆ ಆಗುತ್ತಿರುವ ಹಣಕಾಸಿನ ಸಮಸ್ಯೆಯ ಕುರಿತು ಮುಲಾಜೇ ಇಲ್ಲದೆ ಮೋದಿಯನ್ನು ಬೈಯುತ್ತಿದ್ದಾರೆ. ಅವರಿರುವುದು ಹಾಗೆ. ಒಳ್ಳೆಯದು ಎಂಬ ಭಾವನೆ ಬಂದರೆ ಒಳ್ಳೆಯದು ಎನ್ನುವುದು, ಕೆಟ್ಟದಾಗಿದೆ ಎಂಬುದು ಅರ್ಥವಾದರೆ ಥೋ, ಇವರ ಮನೆ ಹಾಳಾಗ ಎಂದು ಬೈಯುವುದು ಸಹಜ ಗುಣ. ಆದರೆ ಈ ಪ್ರತಿಪಕ್ಷಗಳಿಗೇನಾಗಿತ್ತು? ಭಾರೀ ಪ್ರಮಾಣದ ನೋಟುಗಳ ರದ್ದತಿ ಸರಿಯಾದ ಕ್ರಮವೇ. ಆದರೆ ಇದನ್ನು ಅನುಷ್ಠಾನಗೊಳಿಸುವ ಮುನ್ನ ಪ್ರಿಪರೇಶನ್ ಇರಬೇಕು ಅನ್ನುತ್ತಾರಲ್ಲ? ಅವರು ಮಾಡುವುದಕ್ಕೂ, ಇವರು ಪ್ರತ್ಯುತ್ತರ ಕೊಡುವುದಕ್ಕೂ ಸರಿ ಹೋಯಿತು.
ಸಾಮಾನ್ಯ ಜನರಿಗೆ ಪ್ರತಿಪಕ್ಷಗಳ ಈ ನಡವಳಿಕೆಯಿಂದ ಏನನ್ನಿಸಿತು ಎಂದರೆ ಇವರ ಬಳಿ ಕಾಳಧನವಿದೆ. ಅದನ್ನು ಬಿಳಿ ಮಾಡಿಕೊಳ್ಳಲು ಇವರು ಟೈಮ್ ಕೇಳುತ್ತಿದ್ದಾರೆ ಅನ್ನಿಸತೊಡಗಿತು. ಅಲ್ಲಿಗೆ ಮೋದಿ ಮೇನಿಯಾ ಎಂಬುದು ಎಲ್ಲೆಡೆ ವ್ಯಾಪಕವಾಗಿ ಹಬ್ಬತೊಡಗಿತು. ಮೋದಿಯ ಕ್ರಮದಿಂದ ಸ್ವಲ್ಪ ತೊಂದರೆಯಾದರೂ ಜನ ತ್ಯಾಗಕ್ಕೆ ಸಿದ್ಧರಾಗಿದ್ದಾರೆ. ಇವರು ಯಾರ್ರೀ ವಿರೋಧ ಮಾಡೋಕೆ ಅನ್ನುವ ಮಟ್ಟಕ್ಕೆ ಹೋದರು.
ಸರಿ, ಆದರೆ ಮೋದಿಯ ಕೆಲಸಕ್ಕೆ ಜನರೇಕೆ ತ್ಯಾಗ ಮಾಡಬೇಕು? ಯಾಕೆಂದರೆ ಮೋದಿಯ ಕ್ರಮವೇ ಮೇಲ್ವರ್ಗದ ವ್ಯಾಪಾರಿಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವುದಾಗಿತ್ತು ಎಂದರೆ ಅದಕ್ಕೂ ಜನ ತ್ಯಾಗ ಮಾಡಬೇಕೇ? ದಿನಗಟ್ಟಲೆ ಹೋಗಿ ಕ್ಯೂನಲ್ಲಿ ನಿಲ್ಲಬೇಕೇ? ಇದನ್ನು ಸಮರ್ಪಕವಾಗಿ ಹೇಳುವಲ್ಲಿ ಪ್ರತಿಪಕ್ಷಗಳು ವಿಫಲವಾದವು. ಶುರುವಿನಲ್ಲಿ ಹೋ ಎಂದು ಅರಚಿಕೊಂಡ ಪ್ರತಿಪಕ್ಷಗಳು ಕಾಲ ಕ್ರಮೇಣ ತೆಪ್ಪಗಾಗಿ ಹೋದವು. ಅವು ತೆಪ್ಪಗಾಗುವ ಕಾಲಕ್ಕೆ ಬಡ, ಮಧ್ಯಮ ವರ್ಗದ ಜನರಿಗೆ ನಿಜಾ ಕಣ್ರೀ. ತೊಂದರೆಯ ಅನುಭವವಾಗುತ್ತಿರುವುದು ನಮಗೆ ಅನ್ನಿಸತೊಡಗಿತು. ಅಷ್ಟರಲ್ಲಾಗಲೇ ವಿರೋಧ ಪಕ್ಷಗಳು ಹೆಚ್ಚು ಕಡಿಮೆ ಬಾಯಿ ಮುಚ್ಚಿಕೊಂಡಿದ್ದವು. ಆಗ ಜನ ಮಾಧ್ಯಮಗಳ ಕಡೆ ತಿರುಗಿ ನೋಡಿದರು.
ದುರಾದೃಷ್ಟವೆಂದರೆ ಈ ದೇಶದ ಶೇಕಡ 80ರಷ್ಟು ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ದೊಡ್ಡ ದೊಡ್ಡ ಉದ್ಯಮಿಗಳ ಕೈಲಿವೆ. ಅವರು ಮರಣ ಶಾಸನ ಜಾರಿ ಮಾಡಿದರೂ ಆಯಾ ಮಾಧ್ಯಮಗಳಲ್ಲಿ ಸಂತೋಷವಾಗಿ ಅದನ್ನು ಅಪ್ಪಿಕೊಳ್ಳಲು ಪತ್ರಕರ್ತರು ಗುಲಾಮಗಿರಿಗೆ ರೆಡಿಯಾಗಿ ಬಿಟ್ಟಿದ್ದಾರೆ. ಅಲ್ಲಿ ದಾಳಿ ಆಯಿತು, ಇಲ್ಲಿ ದಾಳಿ ಆಯಿತು ಎಂದು ಹೇಳುವುದೇನು? ಕಿರುಚುವುದೇನು? ಹೀಗೇ ಕಿರುಚಿಕೊಳ್ಳುವ ಭರದಲ್ಲಿ ಮೊದಲನೆಯದಾಗಿ ತಮ್ಮ ಬಳಿ ಇರುವ ಕಾಳಧನವನ್ನು ಅನೇಕ ಮಾಧ್ಯಮಗಳ ಧುರೀಣರು ವೈಟು ಮಾಡಿಕೊಂಡರು.
ಅಂತಿಮವಾಗಿ ಮೇಲ್ಮಟ್ಟದಲ್ಲಿದ್ದವರ ಹಣಕಾಸಿನ ವಹಿವಾಟು ಬಹುತೇಕ ಯಶಸ್ವಿಯಾಗಿ ವೈಟ್ ಮನಿಯ ರೂಪಕ್ಕೆ ತಿರುಗಿ ತಣ್ಣಗಾಯಿತು. ಕೇಂದ್ರ ಸರಕಾರದ ಐಟಿ ರೈಡ್, ಸಿಬಿಐ ರೈಡ್ ಇಡಿ ರೈಡ್ ಎಲ್ಲ ಸೇರಿದರೆ ಅಯ್ಯೋ, ಅದೇನು ಐದು ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಅಧಿಕ ಕಪ್ಪು ಹಣ ಸಿಗಬೇಕಿತ್ತು. ಆದರೆ ಈಗ ಇದ್ದಕ್ಕಿಂತಲೂ ನಾಲ್ಕೂವರೆ ಸಾವಿರ ಕೋಟಿ ರೂ. ಕ್ಯಾಶ್ ಸಿಕ್ಕಿದೆ, ನೂರಾರು ಕೆ.ಜಿ. ಚಿನ್ನ ಸಿಕ್ಕಿದೆ ಎಂದು ಕತೆ ಹೇಳುತ್ತಾರಲ್ಲ? ಇವರೆಂತಹ ದಗಲ್ಬಾಜಿಗಳಿರಬೇಕು? ಇದು ಒಂದು ಭಾಗ. ಎರಡನೇ ಭಾಗವೆಂದರೆ ಯಾರೇ ಆಗಲಿ ಇದರಿಂದ ನಮಗೆ ಕಷ್ಟವಾಗುತ್ತಿದೆ ಎಂದರೆ ಅವರಿಗೆ ದೇಶದ್ರೋಹದ ಪಟ್ಟ ಕೊಡಲು ಕಾಳಧನಿಕರೇ ಸಜ್ಜಾಗಿಬಿಟ್ಟರು. ಏಯ್, ಮೋದಿ ಮಾಡುತ್ತಿರುವುದು ಕಾಳಧನಿಕರನ್ನು ಬಗ್ಗುಬಡಿಯಲು. ಇದರ ವಿರುದ್ಧ ಮಾತನಾಡುತ್ತಿರುವ ನೀವು ದೇಶದ್ರೋಹಿಗಳು ಎಂದು ನಿರಾಯಾಸವಾಗಿ ಹೇಳುವುದು ಇವರ ರೂಢಿಯಾಗಿ ಹೋಯಿತು.
ಆಳವಾಗಿ ಹೊಕ್ಕು ನೋಡಿ, ಮೋದಿ ಎಪಿಸೋಡಿನಲ್ಲಿ ಕಂಡ ಕಂಡವರಿಗೆ ದೇಶದ್ರೋಹದ ಪಟ್ಟ ಕೊಡಲು ಮೂರು ಹಂತದ ಜನರ ತಯಾರಾಗಿ ಹೋದರು. ಈ ಮೂರು ಹಂತದ ಮೇಲು ಭಾಗದಲ್ಲಿ ಖುದ್ದು ಕಾಳಧನಿಕರೇ ಕುಳಿತಿದ್ದರು. ಎರಡನೇ ಹಂತದಲ್ಲಿ ಈ ಕಾಳಧನಿಕರಿಂದ ಲಾಭ ಪಡೆದವರಿದ್ದರು. ಮೂರನೇ ಹಂತದಲ್ಲಿ ಎರಡನೇ ಜನರಿಂದ ಪ್ರೇರಣೆ ಪಡೆದ ಅಮಾಯಕರಿದ್ದರು. ಒಬ್ಬ ವ್ಯಕ್ತಿಗೆ ದೇಶದ್ರೋಹಿ ಎಂಬ ಪಟ್ಟ ಕೊಡುವ ನಿರಾಯಾಸ ಶಕ್ತಿ ಸಿಗುವುದು ಅಮಾಯಕರಿಗೆ ಮಾತ್ರ. ಯಾಕೆಂದರೆ ಇಡೀ ದೇಶ ಸೇರಿ ದಾವೂದ್ ಇಬ್ರಾಹೀಂನಂತಹವನನ್ನು ದೇಶದ್ರೋಹಿ ಎಂದು ತೀರ್ಮಾನಿಸುತ್ತದೆ. ಆದರೆ ಇಲ್ಲಿ ಹಾಗಲ್ಲವಲ್ಲ? ಇನ್ನೂ ಮೀಸೆ ಚಿಗುರಿಲ್ಲದ ಯಬಡೇಸಿಗಳೂ ನಿರಾಯಾಸವಾಗಿ, ಮೋದಿಯನ್ನು ವಿರೋಧಿಸುವವರು ದೇಶದ್ರೋಹಿಗಳು ಎಂದು ಸರ್ಟಿಫಿಕೇಟ್ ಕೊಡುವುದು ಸುಲಭವಾಯಿತು.
ನಿಜವಾದ ಪ್ರಜಾಪ್ರಭುತ್ವ ಎಂದರೆ ಪರ-ವಿರೋಧಗಳ ಮಧ್ಯೆ ಇರುವ ಲೋಪವನ್ನು ಸರಿಪಡಿಸಿಕೊಂಡು ಮುನ್ನಡೆಯುವ ವ್ಯವಸ್ಥೆ. ಆದರೆ ಮೋದಿಯ ಬೆಂಬಲಿಗರು ಇಲ್ಲಿ ವಿರೋಧಕ್ಕೆ ಅವಕಾಶ ನೀಡಲೇ ತಯಾರಿರಲಿಲ್ಲ. ಯಾಕೆಂದರೆ ಆವಾಗಲೇ ಹೇಳಿದಂತೆ ಮೂರು ಹಂತದ ಜನ, ನೀವು ದೇಶದ್ರೋಹಿಗಳು ಎಂದು ಸರ್ಟಿಫಿಕೇಟ್ ನೀಡಲು ಸಜ್ಜಾಗಿಬಿಟ್ಟಿದ್ದರು. ಕಾಳಧನಿಕರು, ಕಾಳಧನಿಕರಿಂದ ಲಾಭ ಪಡೆದವರು, ಅಮಾಯಕರು. ಇವತ್ತಿಗೂ ಹೇಳುತ್ತೇನೆ, ಒಬ್ಬ ದೇಶದ್ರೋಹಿಯನ್ನು ಪತ್ತೆ ಮಾಡುವುದು ಸುಲಭದ ಕೆಲಸ. ಆತ ಇಡುತ್ತಿರುವ ಹೆಜ್ಜೆ ಗುರುತುಗಳಿಂದಲೇ ಅದನ್ನು ನಿರ್ಧರಿಸಬಹುದು. ಆದರೆ ಐನೂರು ಹಾಗೂ ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ವೋದಿ ರದ್ದು ಮಾಡಿದ ಪರಿಣಾಮವಾಗಿ ನಮಗೆ ತೊಂದರೆಯಾಗಿದೆ ಎಂದು ಜನಸಾಮಾನ್ಯರು ಹೇಳಿಕೊಂಡರೆ ಅವರಿಗೆ ದೇಶದ್ರೋಹಿ ಎಂದು ಹಣೆಪಟ್ಟಿ ಹಚ್ಚಲಾಯಿತು. ಆದರೆ ಫೈನಲಿ ಏನಾಯಿತು? ದೇಶದ್ರೋಹಿಯ ಹಣೆಪಟ್ಟಿ ಕಟ್ಟುವವರು ಮೂರು ವರ್ಗದ ಜನ ಎಂಬುದು ಸಾಬೀತಾಗಿ ಹೋಯಿತು. ಮೋದಿ ಕ್ರಮದ ವಿರುದ್ಧ ಯಾರಾದರೂ ಮಾತನಾಡಿದಾಗ ನೀನು ದೇಶದ್ರೋಹಿ ಅನ್ನುವವರನ್ನು ನೋಡಿ. ಅವರು ಈ ಮೂರು ವರ್ಗದ ಪೈಕಿ ಒಂದು ವರ್ಗಕ್ಕೆ ಸೇರಿದವರಾಗಿರುತ್ತಾರೆ.
ಆದರೆ ಒರಿಜಿನಲ್ ಕಾಳಧನಿಕರು ಬುದ್ಧಿವಂತರು. ಪಿಕ್ಚರಿಗೆ ಬಂದರೆ ತಾವೇ ಕಾಳಧನಿಕರು ಎಂಬುದು ಜನರಿಗೆ ಗೊತ್ತಾಗುತ್ತದೆ ಅಂತ ತಮ್ಮಿಂದ ಲಾಭ ಪಡೆದವರಿಗೆ ಈ ಸರ್ಟಿಫಿಕೇಟ್ ಕೊಡುವ ಜವಾಬ್ದಾರಿಯನ್ನು ವಹಿಸಿರುತ್ತಾರೆ. ಅವರು ಕೂಡಾ ಅಮಾಯಕರ ಮೇಲೆ ಪ್ರಭಾವ ಬೀರಿ ಮನಸೋ ಇಚ್ಛೆ ಮಾತನಾಡುವ ಧೈರ್ಯ ತುಂಬುತ್ತಾರೆ. ಇಂತಹವರೇ ದೇಶದ್ರೋಹದ ಸರ್ಟಿಫಿಕೇಟ್ ಕೊಡುವುದು. ಹೀಗಾಗಿ ಇನ್ನು ಮುಂದೆ ಇಂತಹ ಸರ್ಟಿಫಿಕೇಟ್ ಕೊಡಲು ಮುಂದೆ ಬಂದವರನ್ನು ಈ ಮೂರು ವರ್ಗದ ಪೈಕಿ ಯಾವ ವರ್ಗದವರು ಅಂತ ನಿರ್ಧರಿಸಿ ನಕ್ಕು ಸುಮ್ಮನಿದ್ದು ಬಿಡಿ. ಇವತ್ತು ದೊಡ್ಡ ದೊಡ್ಡ ನಗರಗಳಿಂದ ಹಿಡಿದು ಹಳ್ಳಿಗಾಡಿನ ತನಕ ಜನಸಾಮಾನ್ಯರ ಬದುಕು ನರಕವಾಗಿ ಹೋಗಿದೆ. ಮಾರುಕಟ್ಟೆಯಲ್ಲಿ ವ್ಯಾಪಾರವಿಲ್ಲ. ವ್ಯಾಪಾರವಿಲ್ಲದ್ದರಿಂದ ಸರಕಾರಗಳಿಗೆ ಬರಬೇಕಿದ್ದ ತೆರಿಗೆ ಬರುತ್ತಿಲ್ಲ. ಅದೇರೀತಿ ತಳಹಂತಕ್ಕೆ ದುಡ್ಡು ಹರಿಯುತ್ತಿಲ್ಲ. ಒಬ್ಬ ಅರ್ಥಶಾಸ್ತ್ರಜ್ಞ ಮಾಡುವ ಅವಘಡವಲ್ಲ ಇದು. ಒಬ್ಬ ತಲೆ ಮಾಸಿದ ಗಿರಾಕಿ ಮಾತ್ರ ಇಂತಹ ಕೆಲಸ ಮಾಡಬಲ್ಲ.
ಒಂದು ಅಣೆಕಟ್ಟು ಕಟ್ಟುವವನಿಗೆ ಇದರಲ್ಲಿ ಸಂಗ್ರಹವಾಗುವ ನೀರು ಎಲ್ಲಿಗೆ ಹೋಗಿ ತಲುಪುತ್ತದೆ ಅನ್ನುವುದು ಗೊತ್ತಿರುತ್ತದೆ. ಅದಕ್ಕೆ ಪೂರಕವಾಗಿಯೇ ಅಣೆಕಟ್ಟು ನಿರ್ಮಿಸುವ ಮುನ್ನ ಅದರ ರೂಪುರೇಷೆಗಳನ್ನು ನಿರ್ಧರಿಸಿಯೇ ಆತ ಹೆಜ್ಜೆ ಇಟ್ಟಿರುತ್ತಾನೆ. ಆದರೆ ನರೇಂದ್ರ ಮೋದಿ ಯಾರು? ಆ ವ್ಯಕ್ತಿಯ ಅರ್ಹತೆ ಏನು? ಮೋದಿ ಟೀ ಮಾರಿ ಮೇಲೆ ಬಂದಿದ್ದಕ್ಕೆ ಖುಷಿಪಡೋಣ. ಆದರೆ ಟೀ ಮಾರುವವರೆಲ್ಲರೂ ಪ್ರಧಾನಿಯಾಗುವುದಿಲ್ಲ. ಹಾಗೇನಾದರೂ ಆಗಿದ್ದರೆ ಐಟಿ, ಬಿಟಿ, ಐಐಟಿಯಿಂದ ಹಿಡಿದು ಟೀ ಸೆಂಟರ್‌ಗಳೇ ಬೆಟರ್ರು ಎಂದು ತೀರ್ಮಾನಿಸಿ ಉದ್ಯಮಿಗಳು ಅದರ ಮೇಲೆ ಬಂಡವಾಳ ಹಾಕುತ್ತಿದ್ದರು. ಆದರೆ ಇದು ಟೀ ಮಾರುವ ಕೇಸಲ್ಲ. ದೇಶವನ್ನೇ ಮಾರುವ ಕೇಸು. ಇವರು ಮಾಡಿದ ಕೆಲಸದಿಂದ ಖೋಟಾ ನೋಟುಗಳ ಹಾವಳಿ ಕಡಿಮೆಯಾಗುತ್ತದೆ ಎಂದುಕೊಂಡಿದ್ದೀರಾ? ಅದನ್ನು ಮಾಡುವ ಚೀನಾ, ಪಾಕಿಸ್ತಾನದಂತಹ ದೇಶಗಳು ಭಾರತಕ್ಕಿಂತ ವೇಗವಾಗಿ ಖೋಟಾ ನೋಟುಗಳನ್ನು ಮುದ್ರಿಸಿ ಭಾರತಕ್ಕೆ ಬಿಡುತ್ತವೆ.
ಆದರೆ ಮೋದಿಯ ಉದ್ದೇಶ ಅದಾಗಿರಲಿಲ್ಲ. ಅವರಿಗೆ ಬಿಜೆಪಿಯೇತರ ಪಕ್ಷಗಳನ್ನು ಹೊಡೆದು ಹಾಕಬೇಕಿತ್ತು. ದೊಡ್ಡ ದೊಡ್ಡ ಉದ್ಯಮಿಗಳ ಹಿತಾಸಕ್ತಿಯನ್ನು ರಕ್ಷಿಸಬೇಕಿತ್ತು. ಆ ಮೂಲಕ ಇನ್ನೊಂದು ಬಾರಿ ಪ್ರಧಾನಿ ಪಟ್ಟವನ್ನು ಅಲಂಕರಿಸಿದರೆ ತಮ್ಮ ಸರ್ವಾಧಿಕಾರಿ ನೀತಿಗೆ ಜಯ ಸಿಕ್ಕಂತಾಗುತ್ತದೆ. ಆನಂತರ ಬದುಕಿರುವವರೆಗೂ ಈ ದೇಶದ ರಟ್ಟೆ, ಕೈ, ಕಾಲುಗಳನ್ನು ಮುರಿದು ಆರಾಮವಾಗಿ ಆಡಳಿತ ಮಾಡಿಕೊಂಡಿರಬಹುದು ಎಂದವರು ಭಾವಿಸಿದ್ದರು. ಆದರೆ ಮೊನ್ನೆ ಮಾತನಾಡುವಾಗ ಕಡಿಮೆ ದರದಲ್ಲಿ ಸಾಲ ಕೊಡಿಸುತ್ತೇನೆ, ಗರ್ಭಿಣಿಯರಿಗೆ ಆರು ಸಾವಿರ ರೂ. ಭತ್ತೆ ಕೊಡಿಸುತ್ತೇನೆ ಅಂತೆಲ್ಲ ಮಾತನಾಡುವಾಗ ಮೋದಿಯಲ್ಲಿ ಒಬ್ಬ ಪ್ರಧಾನಿಗಿರಬೇಕಾದ ಗುಣವಲ್ಲ, ಕನಿಷ್ಠ ಪಕ್ಷ ಒಬ್ಬ ಗ್ರಾಮ ಪಂಚಾಯತ್ ಸದಸ್ಯನಿಗೆ ಇರಬೇಕಾದ ಅರ್ಹತೆ ಇದೆ ಅಂತ ಅನ್ನಿಸಲಿಲ್ಲ. ತನ್ನನ್ನು ವಿರೋಧಿಸುವವರಿಗೆ ದೇಶದ್ರೋಹಿಗಳು ಎಂದು ಸರ್ಟಿಫಿಕೇಟ್ ಕೊಡಲು ಮೂರು ಹಂತದ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮತ್ತೊಬ್ಬ ಕಾಳಧನಿಕ ಅನ್ನಿಸಿತು ಅಷ್ಟೇ.
ಇಲಿಯನ್ನು ಹಿಡಿಯಲು ಹೊರಟಿದ್ದೇನೆ ಎಂದು ಹೇಳುವ ಮೂಲಕ ಅಸಹ್ಯ ಮಾಡಿಕೊಂಡ ಮೋದಿ, ಕನಿಷ್ಠ ಪಕ್ಷ ದೊಡ್ಡ ದೊಡ್ಡ ಹುಲಿಗಳನ್ನು ಹಿಡಿಯಲು ಪಂಜರ ರೆಡಿ ಮಾಡಿದ್ದರೆ, ಅದನ್ನು ಸಾಬೀತುಪಡಿಸಿದ್ದರೆ ಮೆಚ್ಚಬಹುದಿತ್ತು. ಆದರೆ ಅವರಿಗೆ ಆ ಶಕ್ತಿ ಇಲ್ಲ ಅನ್ನುವುದನ್ನು ಅವರೇ ತೋರಿಸಿದರು. ಪೂರ್ ಫೆಲೋ.
ಕೃಪೆ: ಹಾಯ್ ಬೆಂಗಳೂರ್







