ನೋಟು ರದ್ದತಿ: ಆರ್‌ಬಿಐ ಗವರ್ನರ್ ಉತ್ತರ ತೃಪ್ತಿ ನೀಡದಿದ್ದರೆ ಪ್ರಧಾನಿ ಮೋದಿಯನ್ನೂ ಕರೆಸಬಹುದು - ಪಿಎಸಿ

ಹೊಸದಿಲ್ಲಿ,ಜ.9: ಸಾರ್ವಜನಿಕ ಲೆಕ್ಕಪತ್ರಗಳ ಕುರಿತ ಸಂಸದೀಯ ಸಮಿತಿ(ಪಿಎಸಿ)ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರನ್ನಾದರೂ ತನ್ನೆದುರು ಕರೆಸುವ ಅಧಿಕಾರ ವಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ವಿ.ಥಾಮಸ್ ಅವರು ಸ್ಪಷ್ಟಪಡಿಸಿದ್ದಾರೆ.
ರವಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಥಾಮಸ್, ನೋಟು ರದ್ದತಿ ಕುರಿತಂತೆ ಸಮಿತಿಯ ಪ್ರಶ್ನೆಗಳಿಗೆ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಉತ್ತರಗಳು ತೃಪ್ತಿಕರವಾಗಿರದಿದ್ದಲ್ಲಿ ಅದು ಪ್ರಧಾನಿಯನ್ನು ತನ್ನೆದುರು ಕರೆಸಬಹುದು ಎಂದು ತಿಳಿಸಿದರು. ಪಿಎಸಿಯು ರವಿವಾರ ವಿತ್ತ ಸಚಿವಾಲಯದ ಹಲವಾರು ಅಧಿಕಾರಿಗಳನ್ನು ಕರೆಸಿಕೊಂಡು ನೋಟು ರದ್ದತಿ ಕುರಿತು ಅವರನ್ನು ಪ್ರಶ್ನಿಸಿತ್ತು.
ಮೋದಿ ಅವರು ತನ್ನ ಅಹಮಿಕೆಯನ್ನು ತೃಪ್ತಿಪಡಿಸಿಕೊಳ್ಳಲು ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದ ಥಾಮಸ್, ಅವರು ತನ್ನ ತಪ್ಪು ನಿರ್ಧಾರಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನೋಟು ರದ್ದತಿಯ ಬಳಿಕ ಉಂಟಾದ ನಗದು ಕೊರತೆಯು 50 ದಿನಗಳಲ್ಲಿ ನೀಗಲಿದೆ ಎಂದು ಅವರು ಈ ದೇಶದ ಜನತೆಗೆ ಭರವಸೆ ನೀಡಿದ್ದರು ಎಂದು ಬೆಟ್ಟು ಮಾಡಿದರು.
ದೇಶಾದ್ಯಂತ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳನ್ನು ಕರೆಸಲು ಸಮಿತಿಯು ನಿರ್ಧರಿಸಿತ್ತು ಎಂದು ಹಿರಿಯ ಕಾಂಗ್ರೆಸ ನಾಯಕರೂ ಆಗಿರುವ ಥಾಮಸ್ ತಿಳಿಸಿದರು.
ಮೋದಿಯವರ ಡಿಜಿಟಲ್ ಯೋಜನೆಯನ್ನು ಬೆಂಬಲಿಸುವ ಮೂಲಸೌಕರ್ಯ ಭಾರತದಲ್ಲಿಲ್ಲ ಎಂದ ಅವರು, ಕಾಲ್ ಡ್ರಾಪ್ ಸಮಸ್ಯೆಗಳಿರುವ ಮತ್ತು ದೂರಸಂಪರ್ಕ ಸೌಲಭ್ಯಗಳು ಕಳಪೆಯಾಗಿರುವ ಈ ದೇಶದಲ್ಲಿ ಮೊಬೈಲ್‌ಗಳಲ್ಲಿ ಇ-ವಹಿವಾಟುಗಳು ನಡೆಯುತ್ತವೆ ಎಂದು ಮೋದಿಯವರು ನಿರೀಕ್ಷಿಸುತ್ತಿರುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ನೋಟು ರದ್ದತಿಯ ನಿರ್ಧಾರವನ್ನು ಹೇಗೆ ಮತ್ತು ಯಾರು ತೆಗೆದುಕೊಂಡಿದ್ದರು ಎನ್ನುವುದನ್ನು ವಿವರಿಸುವಂತೆ ಪಿಎಸಿಯು ಪಟೇಲ್‌ಗೆ ಸೂಚಿಸಿದೆ. ಆರ್ಥಿಕತೆಯ ಮೇಲೆ ನೋಟು ರದ್ದತಿಯ ಪರಿಣಾಮವನ್ನು ವಿವರಿಸುವಂತೆ ಮತ್ತು ನಿರ್ಧಾರವನ್ನು ಅಂತಿಮಗೊಳಿಸುವ ಮುನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದ್ದ ಅಧಿಕಾರಿಗಳ ಹೆಸರುಗಳನ್ನು ಸಲ್ಲಿಸುವಂತೆಯೂ ಪಟೇಲ್ ಅವರಿಗೆ ತಿಳಿಸಲಾಗಿದೆ. ಸಮಿತಿಯು ಕೇಳಿರುವ 10 ಪ್ರಶ್ನಗಳಿಗೆ ಉತ್ತರಿಸಲು ಪಟೇಲ್‌ಗೆ ಜ.20ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ.
ನೀವು ಉಲ್ಲೇಖಿಸಬಹುದಾದ ಯಾವುದೇ ಕಾನೂನುಗಳಿರದಿದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮವನ್ನೇಕೆ ತೆಗೆದುಕೊಳ್ಳಬಾರದು ಎಂದೂ ಸಮಿತಿಯು ಪಟೇಲ್ ಅವರಿಗೆ ಡಿ.30ರಂದು ರವಾನಿಸಿರುವ ಪ್ರಶ್ನಾವಳಿಯಲ್ಲಿ ಕೇಳಿದೆ.







