ತರಕಾರಿ ಮುಂದಿಟ್ಟು ತಟ್ಟೆ ಬಾರಿಸಿ ಮೋದಿ ವಿರುದ್ಧ ಆಕ್ರೋಶ ತೋರ್ಪಡಿಸಿದ ಮಹಿಳೆಯರು
ಕೇಂದ್ರದ ವಿರುದ್ಧ ಮಹಿಳಾ ಕಾಂಗ್ರೆಸ್ ವಿನೂತನ ಪ್ರತಿಭಟನೆ

ಉಡುಪಿ, ಜ.9 : ನೋಟು ಅಮಾನ್ಯದಿಂದ ಜನಸಾಮಾನ್ಯರಿಗೆ ಆಗಿರುವ ತೊಂದರೆ ವಿರೋಧಿಸಿ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಧರಣಿ ನಿರತ ಮಹಿಳೆಯರು ಹಣ ಇಲ್ಲದೆ ತರಕಾರಿ ಖರೀದಿಸಲೂ ಸಾಧ್ಯವಾಗುತ್ತಿಲ್ಲ ಎಂಬ ಸಂದೇಶವನ್ನು ಬಿಂಬಿಸುವ ರೀತಿಯಲ್ಲಿ ತಮ್ಮ ಮುಂದೆ ವಿವಿಧ ಬಗೆಯ ತರಕಾರಿಗಳನ್ನು ಇಟ್ಟು ತಟ್ಟೆಯನ್ನು ಬಡಿಯುತ್ತ ಮೋದಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ, ನೋಟು ಅಮಾನ್ಯದ ಬಿಸಿ ಮಹಿಳೆಯರಿಗೆ ಸಾಕಷ್ಟು ಪ್ರಮಾಣದಲ್ಲಿ ತಟ್ಟಿದೆ. 50ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ನಂಬಿ ತಾಳ್ಮೆಯಿಂದ ಕಾದಿದ್ದೇವೆ. ಆದರೆ ಈವರೆಗೆ ಯಾವುದೇ ಬದ ಲಾವಣೆಯಾಗಿಲ್ಲ. ಅದೇ ಪರಿಸ್ಥಿತಿ ಮುಂದುವರೆಯುತ್ತಿದೆಂದು ದೂರಿದರು.
ಕಾಂಗ್ರೆಸ್ ನಾಯಕಿ ಜ್ಯೋತಿ ಹೆಬ್ಬಾರ್ ಮಾತನಾಡಿ, ಮೋದಿ ಸರಕಾರ ಈವರೆಗೆ ಜನರ ನಿರೀಕ್ಷೆಯನ್ನು ಈಡೇರಿಸಿಲ್ಲ. ಬಿಜೆಪಿ ಜನರ ಭಾವನೆಯನ್ನು ಕೆರಳಿಸಿ ಅಧಿಕಾರ ಬಂದು ಆಡಳಿತ ನಡೆಸಿದರೆ, ಕಾಂಗ್ರೆಸ್ ಅಭಿವೃದ್ಧಿಯ ಆಧಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನೋಟು ರದ್ಧತಿಯಿಂದ ದೇಶ ಇದೀಗ ದಿವಾಳಿಯತ್ತ ಸಾಗುತ್ತಿದೆ. ಮತ್ತೆ ಐದು ವರ್ಷ ಮೋದಿ ಸರಕಾರ ಬಂದರೆ ಈ ದೇಶದ ಜನ ಭಿಕ್ಷೆ ಬೇಡಬೇಕಾಗುತ್ತದೆ ಎಂದರು.
ಕಪ್ಪು ಹಣವನ್ನು ವಾಪಾಸ್ಸು ತರಿಸಿ ಬ್ಯಾಂಕ್ ಖಾತೆಗೆ ಹಾಕುವುದು ಬಿಡಿ, ನಮ್ಮ ಹಣವನ್ನು ನಾವು ತೆಗೆಯುವ ಸ್ವಾತಂತ್ರವನ್ನೇ ಕಸಿಯಲಾಗಿದೆ. ನೋಟು ಅಮಾನ್ಯದ 50 ದಿನಗಳಲ್ಲಿ ದೇಶದಾದ್ಯಂತ ಭಾರೀ ಭ್ರಷ್ಟಾಚಾರ ಗಳು ನಡೆದಿವೆ. ಒಟ್ಟಾರೆಯಾಗಿ ಕೇಂದ್ರ ಸರಕಾರ ಜನಸಾಮಾನ್ಯರನ್ನು ಮೋಸ ಮಾಡಲು ಹೊರಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಭಕ್ತರು ಸುಳ್ಳನ್ನು ಪ್ರತಿಬಾರಿ ಹೇಳುತ್ತ ಸತ್ಯವನ್ನಾಗಿಸುವ ಕೆಲಸ ಮಾಡುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಧರಣಿಯಲ್ಲಿ ಕೆಪಿಸಿಸಿ ಸದಸ್ಯರಾದ ಎಂ.ಎ.ಗಫೂರ್, ದಿನೇಶ್ ಪುತ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ಮುಖಂಡರಾದ ಶ್ಯಾಮಲಾ ಭಂಡಾರಿ, ಸರಳಾ ಕಾಂಚನ್, ಅಮೃತ್ ಶೆಣೈ, ಚಂದ್ರಿಕಾ ಶೆಟ್ಟಿ, ಗೋಪಿ ನಾಯ್ಕಿ, ಶೋಭಾ, ಸರಸು ಡಿ.ಬಂಗೇರ, ಲಕ್ಷ್ಮಿ ಭಟ್, ಗೀತಾ ವಾಗ್ಳೆ, ಮಮತಾ ಶೆಟ್ಟಿ, ಸುಜಾತ ಆಚಾರ್ಯ, ಸತೀಶ್ ಅಮೀನ್ ಪಡು ಕೆರೆ ಮೊದಲಾದವರು ಉಪಸ್ಥಿತರಿದ್ದರು.







