ಬಿಜೆಪಿ ಶಾಸಕ ರಾಜು ಕಾಗೆ ಕುಟುಂಬದಿಂದ ಗೂಂಡಾಗಿರಿ
ಶಾಸಕ ಸಹಿತ 13 ಮಂದಿಯ ವಿರುದ್ಧ ಎಫ್‌ಐಆರ್

ಬೆಳಗಾವಿ, ಜ.9: ಫೇಸ್‌ಬುಕ್‌ನಲ್ಲಿ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕಾಗೆ ಪುತ್ರಿ ವಿರುದ್ಧ ಅಶ್ಲೀಲ ಕಮೆಂಟ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತಾಯಿ-ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕಾಗೆ ಸಹಿತ 13 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಿವೇಕ್ ಶೆಟ್ಟಿ ಹಾಗೂ ಆತನ ತಾಯಿ ಉಜ್ವಲಾ ಶೆಟ್ಟಿ ಹಲ್ಲೆಗೊಳಗಾದವರು.
ಕಾಂಗ್ರೆಸ್ ಕಾರ್ಯಕರ್ತನೆನ್ನಲಾದ ವಿವೇಕ್ ಶೆಟ್ಟಿಯ ಮನೆಗೆ ನುಗ್ಗಿದ ಶಾಸಕ ರಾಜು ಕಾಗೆ ಅವರ ಸಹೋದರ ಸಿದ್ದಗೌಡ ಕಾಗೆ ಸಹಿತ 11 ಮಂದಿ ಕಬ್ಬಿಣದ ರಾಡ್, ಕುಡಗೋಲುಗಳಿಂದ ವಿವೇಕ್ ಶೆಟ್ಟಿ ಹಾಗೂ ತಾಯಿ ಉಜ್ವಲಾ ಶೆಟ್ಟಿಯರಿಗೆ ಹಿಗ್ಗಾಮುಗ್ಗಾ ಥಳಿಸಿದ್ದರೆನ್ನಲಾಗಿದೆ. ಇದರಿಂದ ವಿವೇಕ್‌ರ ಎಡಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದು, ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಾಸಕ ರಾಜು ಕಾಗೆ ಅವರ ಗೂಂಡಾಗಿರಿಗೆ ಹೆದರಿ ಪೊಲೀಸ್ ದೂರು ದಾಖಲಿಸಿಲ್ಲ ಎಂದು ವಿವೇಕ್ ಶೆಟ್ಟಿ ಹೇಳಿದ್ದಾರೆ.
ಈ ಘಟನೆಯು ಜನವರಿ 1ರಂದು ನಡೆದಿದ್ದು, ವಿವೇಕ್ ಶೆಟ್ಟಿ ಹಾಗೂ ತಾಯಿ ಮೀರಜ್ನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವೇಕ್ ಶೆಟ್ಟಿಯನ್ನು ಮನೆಯಿಂದ ಎಳೆದೊಯ್ದು ರಾಜು ಕಾಗೆ ಅವರ ಗೋದಾಮಿನಲ್ಲಿ ತೀವ್ರವಾಗಿ ಥಳಿಸಿರುವುದಾಗಿ ವಿವೇಕ್ ಶೆಟ್ಟಿ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ರಾಜು ಕಾಗೆ ಹಾಗೂ ಅವರ ಕುಟುಂಬದ ವಿರುದ್ಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಗೂಂಡಾಗಿರಿ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ. ಪ್ರಕರಣದಲ್ಲಿ ಶಾಸಕ ರಾಜು ಕಾಗೆ ಅವರು 12ನೆ ಆರೋಪಿಯಾಗಿ ಹೆಸರಿಸಲ್ಪಟ್ಟಿದ್ದಾರೆ.
ಹಲ್ಲೆ ವಿಚಾರ ಗೊತ್ತೆ ಇಲ್ಲ: ಶಾಸಕ ರಾಜು ಕಾಗೆ
ವಿವೇಕ್ ಶೆಟ್ಟಿ ಪರಿಚಯ ಇದೆ. ಆದರೆ ಆತನ ಮೇಲಿನ ಹಲ್ಲೆ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನ್ನ ಮಗಳ ಬಗ್ಗೆಗಿನ ಫೇಸ್‌ಬುಕ್ ಕಮೆಂಟ್ ಬಗ್ಗೆಯೂ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಅಶ್ಲೀಲ ಕಮೆಂಟ್ ಸುಳ್ಳು ಆರೋಪ: ವಿವೇಕ್ ಶೆಟ್ಟಿ
ಫೇಸ್‌ಬುಕ್‌ನಲ್ಲಿ ಅಶ್ಲೀಲ ಕಮೆಂಟ್ ಹಾಕಿದ್ದೇನೆ ಎಂಬುದು ಸುಳ್ಳು ಆರೋಪ. ರಾಜಕೀಯದಲ್ಲಿ ನನ್ನ ಬೆಳವಣಿಗೆ ಸಹಿಸದೇ ರಾಜು ಕಾಗೆ ಈ ರೀತಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಹಲ್ಲೆಗೊಳಗಾದ ವಿವೇಕ್ ಶೆಟ್ಟಿ ದೂರಿದ್ದಾರೆ.







