ಜ.13ರಿಂದ ಮೂಡುಬಿದಿರೆಯಲ್ಲಿ ‘ಆಳ್ವಾಸ್ ವಿರಾಸತ್’ ಸಂಭ್ರಮ

ಮಂಗಳೂರು, ಜ.9: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 23ನೆ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಜ.13ರಿಂದ 15ರವರೆಗೆ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆಯ ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಈ ವರ್ಷದ ಆಳ್ವಾಸ್ ವಿರಾಸತ್ ರಂಗೇರಲಿದ್ದು, 150 ಅಡಿ ಉದ್ದ 60 ಅಡಿ ಅಗಲದ ಈ ಬೃಹತ್ ವೇದಿಕೆಯನ್ನು 80ರಿಂದ 100 ಕಲಾವಿದರ ತಂಡದ ಪ್ರದರ್ಶನಗಳು ನಡೆಯುವಂತೆ ಮತ್ತು ಸುಮಾರು 40 ಸಾವಿರ ಪ್ರೇಕ್ಷಕರು ವ್ಯವಸ್ಥೆ ಕಲ್ಪಿಸಲಾಗಿದೆ. ಜ.13ರ ಸಂಜೆ 5:30ಕ್ಕೆ ಡಾ. ವೀರೇಂದ್ರ ಹೆಗಡೆ ಆಳ್ವಾಸ್ ವಿರಾಸತ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಪದ್ಮಭೂಷಣ ವಿ.ಪಿ.ಧನಂಜಯನ್‌ರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದರು.
ವಿರಾಸತ್ ಮೊದಲ ದಿನ ಮಾತ್ರ ಸಭಾ ಕಾರ್ಯಕ್ರಮ ನಡೆಯಲಿದ್ದು, ಉಳಿದ ಎರಡು ದಿನಗಳು ಯಾವುದೇ ಸಭಾ ಕಾರ್ಯಕ್ರಮಗಳಿರುವುದಿಲ್ಲ. ಮೊದಲ ದಿನ ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಳ ಮೇರು ಕಲಾವಿದರಿಬ್ಬರು ಕೊಳಲು-ಬಾನ್ಸುರಿ ಜುಗಲ್‌ಬಂದಿಯ ಮೂಲಕ ಒಂದೇ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಜ.14ರಂದು ‘ನಾದ ಮಾಧುರ್ಯ’ದಲ್ಲಿ ಖ್ಯಾತ ವಾದ್ಯ ಕಲಾವಿದರು ಒಟ್ಟಾಗಲಿದ್ದಾರೆ.
9ರ ಹರೆಯದ ಬೆಂಗಳೂರಿನ ರಾಹುಲ್ ವೆಲ್ಲಾಲ್ ತನ್ನ ಹಾಡುಗಾರಿಕೆಯನ್ನು ಪ್ರಸ್ತುತಪಡಿಸಲಿದ್ದಾನೆ.
ಜ.15ರಂದು ಹಿಂದಿ ಚಿತ್ರರಂಗದ ಹಿನ್ನಲೆ ಗಾಯಕರಾದ ಮುಂಬೈಯ ಶಾನ್ ಹಾಗೂ ಪಾಯಲ್ ದೇವ್ ಸಂಗೀತ ರಸಸಂಜೆಯ ಮೂಲಕ ಸಂಗೀತಾಸಕ್ತರ ಮನಸ್ಸನ್ನು ಸೂರೆಗೊಳ್ಳಲಿದ್ದಾರೆ. ಅವರನ್ನು ಅನುಸರಿಸಿಕೊಂಡು ಉಡುಪಿಯ ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್‌ನ ಗಾಯನ ಕಲಾವಿದೆಯರಿಂದ ‘ಗಾನಾರ್ಚನ’ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ ಪದ್ಮನಾಭ ಶೆಣೈ, ಉಪನ್ಯಾಸಕರಾದ ಪ್ರಸಾದ ಶೆಟ್ಟಿ, ದೇವಿಶ್ರೀ ಶೆಟ್ಟಿ ಉಪಸ್ಥಿತರಿದ್ದರು.
ವಿ.ಪಿ.ಧನಂಜಯನ್ ಪರಿಚಯ
ಭಾರತೀಯ ನೃತ್ಯ ಪರಂಪರೆಯಲ್ಲಿ ಕಥಕ್ಕಳಿ ಹಾಗೂ ಭರತನಾಟ್ಯ ಕ್ಷೇತ್ರದಲ್ಲಿ ಖ್ಯಾತರಾದ ಪದ್ಮಭೂಷಣ ವಿ.ಪಿ. ಧನಂಜಯನ್ ಕೇರಳದ ಪಯ್ಯನ್ನೂರಿವರು. ಮದ್ರಾಸಿನ ಕಲಾಕ್ಷೇತ್ರದಲ್ಲಿ ರುಕ್ಮಿಣಿ ದೇವಿಯ ಮಾರ್ಗದರ್ಶನದಲ್ಲಿ ಪಳಗಿದ ಅದ್ವಿತೀಯ ನೃತ್ಯ ಸಾಧಕರು. ಖ್ಯಾತ ನೃತ್ಯ ಕಲಾವಿದೆ ಶಾಂತಾರನ್ನು ವರಿಸಿ ನೃತ್ಯ ಕ್ಷೇತ್ರದಲ್ಲಿ ‘ಧನಂಜಯನ್ಸ್’ರೆಂದೇ ಇವರು ಪ್ರಸಿದ್ಧರಾಗಿದ್ದಾರೆ. ಕೇಂದ್ರ ಹಾಗು ರಾಜ್ಯ ಸರಕಾರಗಳ, ಸಂಘಸಂಸ್ಥೆಗಳ ಹಲವು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿರುವ ಇವರಿಗೆ 1 ಲಕ್ಷ ರೂ. ನಗದಿನೊಂದಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ.







