ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರ ತಾಯಿಯ ಕಣ್ಣುದಾನ
ಆಪ್ತರಿಂದ ‘ಹೋರಾಟ’ದ ಪ್ರತಿಜ್ಞೆ ಸ್ವೀಕಾರ
ಮಂಗಳೂರು, ಜ.9: ಸುಮಾರು 10 ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾರ ತಾಯಿ ಲಕ್ಷ್ಮೀ ಬಾಳಿಗಾರ ಕಣ್ಣುಗಳ ದಾನ ಪ್ರಕ್ರಿಯೆಯು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆಯಿತು.
ತೀವ್ರ ಅನಾರೋಗ್ಯದಿಂದಾಗಿ ಲಕ್ಷ್ಮೀ ಬಾಳಿಗಾರನ್ನು ಶನಿವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರವಿವಾರ ನಿಧನರಾಗಿದ್ದರು. ಕುಟುಂಬಸ್ಥರು ಈ ಮೊದಲೇ ತೀರ್ಮಾನಿಸಿದಂತೆ ತಕ್ಷಣ ಮೃತ ಲಕ್ಷ್ಮೀ ಬಾಳಿಗಾರ ಕಣ್ಣುಗಳನ್ನು ದಾನ ಮಾಡುವ ಪ್ರಕ್ರಿಯೆ ನಡೆಸಿಕೊಟ್ಟರು.
ಲಕ್ಷ್ಮೀ ಬಾಳಿಗಾರ ಅಂತ್ಯಸಂಸ್ಕಾರವು ಸೋಮವಾರ ನಗರದಲ್ಲಿ ನಡೆಯಿತು. ಅದಕ್ಕೂ ಮುನ್ನ ವಿನಾಯಕ ಬಾಳಿಗಾ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಹೋರಾಟ ನಡೆಸಿದ್ದ ಪ್ರೊ. ನರೇಂದ್ರ ನಾಯಕ್, ಡಿವೈಎಫ್‌ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮತ್ತಿತರರು ‘ನ್ಯಾಯ ಸಿಗುವವರೆಗೆ ಹೋರಾಟ ಮಾಡುವೆವು’ ಎಂದು ಪ್ರತಿಜ್ಞೆ ಸ್ವೀಕರಿಸಿದರು.
‘ವಿನಾಯಕ ಬಾಳಿಗಾ ಹತ್ಯೆಗೈದ ದುಷ್ಕರ್ಮಿಗಳಿಗೆ ನ್ಯಾಯ ದೊರಕಿಸಿಕೊಡಲು ನಿರಂತರ ಪ್ರಯತ್ನ ಮಾಡಿದ್ದೇವೆ. ಆದರೆ, ತಮ್ಮ ಜೀವಿತಾವಧಿಯಲ್ಲಿ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗಿಲ್ಲ. ಅದಕ್ಕಾಗಿ ಕ್ಷಮಿಸಿರಿ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವೆವು. ಯಾವ ಕಾರಣಕ್ಕೂ ಹೋರಾಟ ಕೈ ಬಿಡುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮಾಡುವೆವು. ನೀವು ದಾನಗೈದ ಆ ಕಣ್ಣುಗಳಾದರೂ ನ್ಯಾಯ ಸಿಗುವುದನ್ನು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ನೋಡುವ ವಿಶ್ವಾಸ ನಮಗಿದೆ’ ಎಂದು ಹೇಳಿಕೊಂಡು ಪಾರ್ಥಿವ ಶರೀರವನ್ನು ಬಿಟ್ಟುಕೊಟ್ಟೆವು ಎಂದು ಪ್ರೊ.ನರೇಂದ್ರ ನಾಯಕ್ ‘ಪತ್ರಿಕೆ’ಗೆ ತಿಳಿಸಿದ್ದಾರೆ.
ಲಕ್ಷ್ಮೀ ಬಾಳಿಗಾ ತನ್ನ ಏಕೈಕ ಪುತ್ರ ವಿನಾಯಕ ಬಾಳಿಗಾರ ಹತ್ಯೆಯಾದಂದಿನಿಂದ ಖಿನ್ನತೆಗೊಳಗಾಗಿದ್ದರು. ಲಕ್ಷ್ಮೀ ಬಾಳಿಗಾ ತನ್ನ ಪತಿ ಬಿ.ರಾಮಚಂದ್ರ ಬಾಳಿಗಾರೊಂದಿಗೆ ಪುತ್ರನ ಹಂತಕರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಾಗೂ ನ್ಯಾಯಕ್ಕಾಗಿ ನಿರಂತರ ಹೋರಾಟವನ್ನು ನಡೆಸುತ್ತಿದ್ದರು.







