ರಾಷ್ಟ್ರಮಟ್ಟದ ಪ.ಪೂ. ಕಾಲೇಜು ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

ಬೆಳ್ತಂಗಡಿ, ಜ.9 : ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಪದವಿ ಪೂರ್ವ ಕಾಲೇಜಿನ ಬಾಲಕಿಯರ ವಾಲಿಬಾಲ್ ಪಂದ್ಯಾಟವನ್ನು ಡಾ.ಡಿ.ವೀರೇಂದ್ರಹೆಗ್ಗಡೆಯವರು ನೆರವೇರಿಸಿದರು.
ರಾಜ್ಯ ಸರಕಾರದ ಯುವಜನಸೇವೆ ಮತ್ತು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್, ಶಾಸಕ ಕೆ ಅಭಯಚಂದ್ರ ಜೈನ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು .
ದೇಶದ ವಿವಿಧ ಭಾಗಗಳಿಂದ 27 ತಂಡಗಳು ಭಾಗವಹಿಸಲಿದ್ದು , ಪಂದ್ಯಾಟ ನಾಲ್ಕು ದಿನಗಳ ಕಾಲ ನಡೆಯಲಿದೆ.
ಬೆಳ್ತಂಗಡಿ: 19 ವರ್ಷ ಕೆಳಗಿನ ರಾಷ್ಟ್ರಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟವನ್ನು ಉಜಿರೆಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸೋಮವಾರ ಸಂಜೆ ಉದ್ಘಾಟಿಸಿದರು.
ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಉನ್ನತಿಗೆ ಸಹಾಯಕಾರಿ. ವಿಜ್ಞಾನ-ತಂತ್ರಜ್ಞಾನದ ಆವಿಷ್ಕಾರಗಳಿಂದಾಗಿ ಇಂದು ಅಂತರಾಷ್ಟ್ರೀಯ ಮಟ್ಟದ ಜ್ಞಾನವನ್ನು ಗಳಿಸಿಕೊಳ್ಳಬಹುದಾಗಿದ್ದು ಕ್ರೀಡೆಗೂ ಇದು ಸಹಕಾರಿಯಾಗಿದೆ. ಯುವಜನತೆ ದೇಶದ ಆಸ್ತಿಯಾಗಿದ್ದಾರೆ. ಇಂದು ಭಾರತವು ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪುವತ್ತ ಸಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಆರ್ಥಿಕ ಕೊರತೆಯಿಂದಾಗಿ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳು ಕಳೆದ 35 ವರ್ಷಗಳಿಂದ ಕ್ರೀಡೆಗೆ ಬಹಳಷ್ಟು ಪ್ರೋತ್ಸಾವನ್ನು ನೀಡುತ್ತಾ ಬಂದಿದೆ ಎಂದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿದ ರಾಜ್ಯದ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಸರಕಾರದ ವತಿಯಿಂದ ರೂ. 5ಲಕ್ಷ ಅನುದಾನದ ಚೆಕ್‌ನ್ನು ಎಸ್‌ಡಿಎಂ ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರೊ. ಎನ್. ದಿನೇಶ್ ಚೌಟ ಅವರಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ಡಾ ಹೆಗ್ಗಡೆಯವರು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಮೂಲಕ ಕ್ರೀಡೆಗಾಗಿ ರೂ. 50 ಲಕ್ಷವನ್ನು ವಾರ್ಷಿಕವಾಗಿ ಖರ್ಚು ಮಾಡುತ್ತಿರುವುದು ಅನುಕರಣೀಯ. ಇದರಿಂದ ಗ್ರಾಮೀಣ ಪ್ರತಿಭೆಗಳು ಮುಂದೆ ಬರಲು ಸಹಾಯಕವಾಗುತ್ತದೆ ಎಂದರು.
ಶಾಸಕ ಅಭಯಚಂದ್ರ ಜೈನ್ ಶುಭ ಹಾರೈಸಿದರು.
ವೇದಿಕೆಯಲ್ಲಿ ಎಸ್‌ಜಿಎಫ್‌ಐ ನ ಉಪಾಧ್ಯಕ್ಷ ಆರ್.ಕೆ.ಪರಿವಾರ್, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಮಿಶ್ರಾ, ನಿರೀಕ್ಷಕ ದಿನೇಶ್ ಕುಮಾರ್, ಪ.ಪೂ.ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ತಿಮ್ಮಯ್ಯ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳ್ತೆ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯ, ಉಜಿರೆ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ, ಎಸ್‌ಡಿಎಂ ಪದವಿ ಕಾಲೇಜಿನ ಪ್ರಾಚಾರ್ಯ ಡಾ ಮೋಹನ ನಾರಾಯಣ್, ಪಿ.ಯು. ಕಾಲೇಜಿನ ಉಪ ಪ್ರಾಚಾರ್ಯ ಪ್ರಮೋದ್ ಕುಮಾರ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರಮೇಶ್ ಎಚ್ ಹಾಗೂ ಸಂದೇಶ್ ಪೂಂಜ ಇದ್ದರು.
ಕರ್ನಾಟಕ ತಂಡದ ನಾಯಕಿ ಯಶೋದಾ ಕ್ರೀಡಾಳುಗಳಿಗೆ ಪ್ರಮಾಣವಚನ ಭೋಧಿಸಿದರು.
ಪ.ಪೂ.ಕಾಲೇಜಿನ ಪ್ರಾಚಾರ್ಯ ಪ್ರೋ. ಎನ್. ದಿನೇಶ್ ಚೌಟ ಸ್ವಾಗತಿಸಿದರು.
ಉಪನ್ಯಾಸಕ ಡಾ ಬಿ.ಎ.ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು, ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಬಾಲಭಾಸ್ಕರ್ ವಂದಿಸಿದರು.
ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ, ಪದವಿಪೂರ್ವ ಇಲಾಖೆ ಹಾಗು ಎಸ್‌ಡಿಎಂ ಉಜಿರೆ ಕಾಲೇಜಿನ ಸುವರ್ಣಮಹೋತ್ಸವ ವರ್ಷಾಚರಣೆಯ ಅಂಗವಾಗಿ ನಾಲ್ಕು ದಿನಗಳ 62 ನೇ ರಾಷ್ಟ್ರಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ದೇಶದ ವಿವಿಧ ರಾಜ್ಯಗಳ 27 ತಂಡಗಳು ಭಾಗವಹಿಸುತ್ತಿವೆ.
ಮೊದಲನೇ ದಿನ ಹಿಮಾಚಲ ಪ್ರದೇಶ ಹಾಗೂ ಛತ್ತೀಸ್ ಗಢ , ಕೇರಳ ಹಾಗೂ ಕೆವಿಎಸ್, ಕರ್ನಾಟಕ ಹಾಗೂ ತೆಲಂಗಾಣ, ಹರಿಯಾಣ ಹಾಗೂ ಒಡಿಸ್ಸಾ, ಮಹಾರಾಷ್ಟ್ರ ಹಾಗೂ ಉತ್ತರಾಖಂಡ, ತಮಿಳು ನಾಡು ಹಾಗೂ ಎನ್.ವಿ.ಎಸ್.ತಂಡಗಳ ನಡುವೆ ಸ್ಪರ್ಧೆಗಳು ನಡೆದವು.
ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡದ ಪ್ರತಿಯೊಬ್ಬ ಆಟಗಾರ್ತಿಯರಿಗೆ ತಲಾ ರೂ. 10,000 ದಂತೆ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡದ ಪ್ರತಿಯೊಬ್ಬ ಆಟಗಾರ್ತಿಯರಿಗೆ ತಲಾ ರೂ. 5,000 ನಗದು ಪ್ರೋತ್ಸಾಹವನ್ನು ಡಾ ಹೆಗ್ಗಡೆಯವರು ಪ್ರಕಟಿಸಿದರು.







