ರಾಜ್ಯ ಸರ್ಕಾರ ಪತ್ರಕರ್ತರಿಗೆ ಯೋಜನೆ ರೂಪಿಸಲು ವಿಫಲವಾಗಿದೆ : ಎನ್ ರಾಜು
ಭಟ್ಕಳ ಬೆಳ್ಳಿಹಬ್ಬದ ಸಮಾರಂಭದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ

ಭಟ್ಕಳ, ಜ.9 : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಾಗೂ ಹಿಂದಿನ ಎಲ್ಲಾ ಸರಕಾರಗಳು ಪತ್ರಕರ್ತರಿಗೆ ಸಮರ್ಪಕವಾದ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್ ರಾಜು ಹೇಳಿದರು.
ಪಟ್ಟಣದ ಗುರು ಸುಧೀಂದ್ರ ಕಾಲೇಜಿನ ಮೈದಾನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಅವರು ಹೊಸದಾಗಿ ರಚನೆಯಾಗಿರುವ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಲ್ಲಿನ ಸರಕಾರಗಳು ಪತ್ರಕರ್ತರಿಗೆ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಆದರೆ ನಮ್ಮ ಕರ್ನಾಟಕದಲ್ಲಿ ಪತ್ರಕರ್ತರಿಗೆ ಆರೋಗ್ಯ ಭದ್ರತೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕೊಡಿ ಎಂದು ಹಲವು ವರ್ಷಗಳಿಂದ ಸಂಘದಿಂದ ಆಗ್ರಹಿಸುತ್ತಾ ಬಂದಿದ್ದರೂ, ಸರಕಾರ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಹೇಳಿದರು.
ಪತ್ರಿಕಾ ರಂಗ ಇಂದು ಪತ್ರಿಕೋದ್ಯಮವಾಗಿದೆ. ಸ್ಥಳೀಯ ಮಟ್ಟದ ಪತ್ರಿಕೆಗಳ ವರದಿಗಾರರು ಸಂಕಷ್ಟದಲ್ಲಿದ್ದು, ಯಾವುದೇ ಭದ್ರತೆ ಇಲ್ಲವಾಗಿದೆ. ಈ ಬಗ್ಗೆ ಸರಕಾರದ ಮೇಲೆ ಶಾಸಕರು ಒತ್ತಡ ಹೇರಿ ಪತ್ರಕರ್ತರಿಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದ ಅವರು, ರಾಜ್ಯದಲ್ಲೇ ಬೆಳ್ಳಿ ಹಬ್ಬ ಆಚರಿಸುತ್ತಿರುವ ಮೊದಲ ಪತ್ರಕರ್ತರ ಸಂಘ ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘ ಆಗಿದೆ. ಇದೊಂದು ಮಾದರಿ ಸಂಘವಾಗಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ.
ಬೆಳ್ಳಿಹಬ್ಬವನ್ನು ಅದ್ಧೂರಿಯಾಗಿ ನಡೆಸಿ ವರ್ಷವಿಡೀ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಶ್ಲಾಘನೀಯ. ಈ ಸಂಘಕ್ಕೆ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಉತ್ತಮ ಸಂಘ ಎನ್ನುವ ಪ್ರಶಸ್ತಿ ನೀಡಲಾಗುವುದು . ಭಟ್ಕಳದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಟ್ಟಡದ ಅಗತ್ಯವಿದ್ದು, ಮುಂದಿನ ವರ್ಷದೊಳಗಾಗಿ ಇದಕ್ಕೆ ಜಾಗ ದೊರಕಿಸಿ ಕಟ್ಟಡಕ್ಕೆ ಸರಕಾರದಿಂದ ಅನುದಾನ ಕಲ್ಪಿಸಬೇಕು ಎಂದು ಶಾಸಕರಲ್ಲಿ ಅವರು ಮನವಿ ಮಾಡಿದರು.







