ಮಾವನ ಮನೆಯಲ್ಲಿ ವಾಸ್ತವ್ಯ ಮುಂದುವರಿಕೆಗೆ ವಿಧವೆಗೆ ಅವಕಾಶ ನೀಡಿದ ನ್ಯಾಯಾಲಯ

ಹೊಸದಿಲ್ಲಿ,ಜ.9: ಪತಿಯ ಮರಣಾನಂತರ ತನ್ನ ಮನೆಯಲ್ಲಿ ಸೊಸೆಯ ವಾಸ್ತವ್ಯ ಹಕ್ಕಿನನ ವಿರುದ್ಧ ಆಗ್ನೇಯ ದಿಲ್ಲಿಯ ನಿವಾಸಿಯೋರ್ವ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಇಲ್ಲಿಯ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯವು, ವಿಧವೆ ಮತ್ತು ಆಕೆಯ ಮಕ್ಕಳ ತಲೆಯ ಮೇಲೆ ಸೂರಿಲ್ಲದಂತೆ ಮಾಡುವಂತಿಲ್ಲ ಎಂದು ಹೇಳಿದೆ.
ಆದರೆ ತನ್ನ ಮಾವನ ಮನೆಯಲ್ಲಿ ಸೊಸೆಯು ವಾಸ್ತವ್ಯದ ಹಕ್ಕನ್ನು ಮಂಡಿಸಬಹುದೇ ಎನ್ನುವುದನ್ನು ನ್ಯಾಯಾಲಯವು ನಿರ್ಧರಿಸಲಿಲ್ಲ. ಕೌಟುಂಬಿಕ ಹಿಂಸೆ ಪ್ರಕರಣದ ವಿಚಾರಣೆ ಸಂದರ್ಭ ಇದನ್ನು ಪರಿಶೀಲಿಸಬಹುದಾಗಿದೆ ಎಂದು ಅದು ಹೇಳಿತು.
ತನ್ನ ಪತಿಯ ನಿಧನದ ಬೆನ್ನಿಗೇ ತನ್ನ ಮಾವ ತನ್ನನ್ನು ಮತ್ತು ಇಬ್ಬರು ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ಅವರು ತನ್ನೊಂದಿಗೆ ಪದೇ ಪದೇ ಜಗಳವಾಡುತ್ತ ಹಿಂಸೆ ನೀಡುತ್ತಿದ್ದರು ಎಂದು ದೂರಿಕೊಂಡು ಮಹಿಳೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಳು.
ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯವು ಮಹಿಳೆಯ ಪತಿ ಜೀವಂತವಿದ್ದಾಗ ಆಕೆ ವಾಸವಾಗಿದ್ದ ಮನೆಯ ಭಾಗವನ್ನು ಆಕೆಯ ವಶಕ್ಕೆ ವಾಪಸ್ ನೀಡುವಂತೆ ಮಾವನಿಗೆ ಆದೇಶಿಸಿತ್ತು. ಇಲ್ಲದಿದ್ದರೆ ಆಕೆಗೆ ಪ್ರತಿ ತಿಂಗಳು ಮನೆಬಾಡಿಗೆಯಾಗಿ 3,000 ರೂ.ಗಳನ್ನು ಪಾವತಿಸುವಂತೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆಯ ಮಾವ ಮೇಲ್ಮನವಿ ಸಲ್ಲಿಸಿದ್ದ.
ಉಭಯ ಪಕ್ಷಗಳ ವಾದವಿವಾದಗಳ ಇತ್ಯರ್ಥಕ್ಕೆ ಕಾಲಾವಕಾಶ ಅಗತ್ಯವಿದೆ. ಪ್ರಕರಣದ ತೀರ್ಪು ಹೊರಬೀಳುವವರೆಗೆ ಮಹಿಳೆ ಮತ್ತು ಆಕೆಯ ಮಕ್ಕಳಿಗೆ ಸೂರಿಲ್ಲದಂತೆ ಮಾಡಲಾಗದು. ಹೀಗಾಗಿ ಅವರು ಅದೇ ಮನೆಯಲ್ಲಿ ವಾಸ್ತವ್ಯ ಮುಂದುವರಿಸಬಹುದು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧಿಶ ಸಂಜಯ್ ಗರ್ಗ್ ಹೇಳಿದರು.







