ಸರಣಿ ಅಪಘಾತ: ಕೊಡಗು ಎಸ್ಪಿಗೆ ಗಾಯ

ಕುಂದಾಪುರ, ಜ.9: ತಲ್ಲೂರು ಸಮೀಪದ ರಾಜಾಡಿ ಸೇತುವೆ ಬಳಿ ಇಂದು ಸಂಜೆ 4.30ರ ಸುಮಾರಿಗೆ ಸಂಭವಿಸಿದ ಸರಣಿ ಅಪಘಾತದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಬೈಂದೂರು ಕಡೆಯಿಂದ ಕುಂದಾಪುರ ಕಡೆ ಬರುತ್ತಿದ್ದ ಬಾಗಲಕೋಟೆಯ ಟೆಂಪೊ ಟ್ಯಾಕ್ಸ್ ಎದುರಿನಲ್ಲಿ ಹೋಗುತ್ತಿದ್ದ ಖಾಸಗಿ ಬಸ್‌ನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಎಸ್ಪಿಯವರ ಕಾರಿಗೆ ಢಿಕ್ಕಿ ಹೊಡೆಯಿತು. ಇದರಿಂದ ನಿಯಂತ್ರಣ ತಪ್ಪಿದ ಕಾರು ಬಸ್ಸಿಗೆ ಮುಂದಿನಿಂದ ಢಿಕ್ಕಿ ಹೊಡೆದು ಜಖಂಗೊಂಡಿದೆ.
ಅಪಘಾತದಿಂದ ಎಸ್ಪಿ ರಾಜೇಂದ್ರ ಪ್ರಸಾದ್ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಅವರು ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಟ್ರಾಕ್ಸ್ ಚಾಲಕ ಬಾಗಲಕೋಟೆಯ ರಂಗನಾಥ್ ಎಂಬಾತನಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ರಾಜೇಂದ್ರ ಪ್ರಸಾದ್ ಕಾರಿನಲ್ಲಿ ತಮ್ಮ ಕುಟುಂಬದೊಂದಿಗೆ ಮುರ್ಡೆಶ್ವರಕ್ಕೆ ತೆರಳುತ್ತಿದ್ದರೆನ್ನಲಾಗಿದೆ. ಇವರು ಈ ಹಿಂದೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು.
ಅಪಘಾತದಿಂದ ಸುಮಾರು ಒಂದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು.
ಈ ಬಗ್ಗೆ ಕುಂದಾಪುರ ಸಂಚಾರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







