ಕೋಟ ಬಳಿ ಭೀಕರ ಅಪಘಾತ: ಓರ್ವ ಮೃತ್ಯು
ಇಬ್ಬರು ಗಂಭೀರ ಸಹಿತ 6 ಮಂದಿಗೆ ಗಾಯ

ಕೋಟ, ಜ.9: ತೆಕ್ಕಟ್ಟೆ ಶ್ರೀರಾಘವೇಂದ್ರ ಮಠದ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಉಡುಪಿ ಕಡೆಯಿಂದ ಕುಂದಾಪುರ ಕಡೆ ಬರುತ್ತಿದ್ದ ವ್ಯಾಗನಾರ್ ಕಾರು ಅತಿವೇಗದಿಂದ ಬಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಢಿಕ್ಕಿ ಹೊಡೆದು ಹಾರಿ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಫಾರ್ಚೂನರ್ ಕಾರಿಗೆ ಢಿಕ್ಕಿ ಹೊಡೆಯಿತು. ಇದರಿಂದ ಎರಡು ಕಾರುಗಳು ಜಖಂಗೊಂಡವು.
ವ್ಯಾಗನಾರ್ ಕಾರಿನಲ್ಲಿದ್ದ ಕೇರಳ ಕಣ್ಣೂರಿನ ಶಿಬು(36) ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.
ಉಳಿದಂತೆ ಇದೇ ಕಾರಿನಲ್ಲಿದ್ದ ರಿತೇಶ್, ಕೃಷ್ಣನ್ ಗಂಭೀರವಾಗಿ ಗಾಯಗೊಂಡಿದ್ದು, ಸಜೀವನ್ ಹಾಗೂ ಪ್ರಮೋದ್ ಎಂಬವರು ತೀವ್ರ ಗಾಯಗೊಂಡಿದ್ದರು.
ಫಾರ್ಚೂನರ್ ಕಾರಿನಲ್ಲಿದ್ದ ಮಹಾರಾಷ್ಟ್ರ ಪುಣೆಯ ಸುಮಿತ್ ದುಮಾಲ್ ಮತ್ತು ಪ್ರಮೋದ್ ಮಾನೆ ತೀವ್ರವಾಗಿ ಗಾಯಗೊಂಡಿದ್ದಾರೆ.
ಇವರೆಲ್ಲ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವ್ಯಾಗನರ್ ಕಾರಿ ನಲ್ಲಿದ್ದವರು ಕೇರಳದಿಂದ ಕೊಲ್ಲೂರು ದೇವಸ್ಥಾನಕ್ಕೆ ತೆರಳುತ್ತಿದ್ದರು.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







