ನೋಟು ನಿಷೇಧದಿಂದ ಜಿಡಿಪಿ ಮೇಲೆ ಪ್ರತಿಕೂಲ ಪರಿಣಾಮ: ಮಾಜಿ ಪ್ರಧಾನಿ

ಹೊಸದಿಲ್ಲಿ,ಜ.9: ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಮೇಲೆ ನಗದು ಅಮಾನ್ಯತೆಯಿಂದ ತೀವ್ರವಾದ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಹಾಗೂ ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಇದೊಂದು ಪ್ರಮುಖ ವಿಷಯವಾಗಲಿದೆಯೆಂದು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಸೋಮವಾರ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಸೋಮವಾರ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದ ಅವರು, ನೋಟು ನಿಷೇಧದಿಂದ ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಗಣನೀಯವಾದ ಅಡ್ಡಪರಿಣಾಮವನ್ನು ನೀವು ಕಾಣುವಿರಿ ಎಂದು ಹೇಳಿದರು. ಕಳೆದ ಆರ್ಥಿಕ ವರ್ಷದಲ್ಲಿ ಜಿಡಿಪಿ ದರದ ಶೇ.7.6ರಷ್ಟಿದ್ದರೆ, 2016-17ನೆ ಸಾಲಿನಲ್ಲಿ ಅದು ಶೇ.7.1ಕ್ಕೆ ಕುಸಿಯಲಿದೆಯೆಂಬ ಕೇಂದ್ರ ಅಂಕಿಅಂಶ ಸಂಸ್ಥೆಯ ರಾಷ್ಟ್ರೀಯ ಆದಾಯ ಘಟಕ ಮುನ್ಸೂಚನೆ ನೀಡಿರುವುದನ್ನು ಅವರು ಈ ಸಂದರ್ಭ ಪ್ರಸ್ತಾಪಿಸಿದರು.
ನೋಟು ರದ್ದತಿಯ ವಿಷಯವಾಗಿ ಈ ಹಿಂದೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರು, ನಗದು ಅಮಾನ್ಯತೆಯ ನಿರ್ವಹಣೆಯಲ್ಲಿ ಕೇಂದ್ರ ಸರಕಾರ ಘೋರವಾದ ವೈಫಲ್ಯವನ್ನು ಕಂಡಿದೆ ಹಾಗೂ ಇದೊಂದು ಸಂಘಟಿತ ದರೋಡೆ ಹಾಗೂ ಕಾನೂನುಬದ್ಧಗೊಳಿಸಲ್ಪಟ್ಟ ಸುಲಿಗೆ’’ ಎಂದು ಟೀಕಿಸಿದ್ದರು.500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಮೋದಿ ಸರಕಾರದ ಕ್ರಮವನ್ನು ಬಲವಾಗಿ ಟೀಕಿಸಿದ ಅವರು, ಇದರಿಂದಾಗಿ ದೇಶದ ಜಿಡಿಪಿ ದರದಲ್ಲಿ ಶೇ.2ರಷ್ಟು ಕುಸಿತವುಂಟಾಗಲಿದೆಯೆಂದು ಸದನಕ್ಕೆ ತಿಳಿಸಿದ್ದರು.







