ಡ್ರಗ್ಸ್ ನಿರ್ಮೂಲನೆಗೆ ಜಿಲ್ಲಾ ಮಟ್ಟದ ವಿಶೇಷ ಪೊಲೀಸ್ ದಳ ರಚನೆಯಾಗಲಿ: ಕೂರ್ನಡ್ಕ ಖತೀಬ್
ತುಂಬೆ ಕ್ರೆಸೆಂಟ್ ಯಂಗ್ ಮೆನ್ಸ್ ನಿಂದ 'ಮಾದಕ ಬದುಕು ಭಯಾನಕ' ಅಭಿಯಾನದ ಸಮಾರೋಪ

ಬಂಟ್ವಾಳ, ಜ. 9: ಮಾದಕ ವಸ್ತುಗಳ ಸೇವನೆ ಹಾಗೂ ಸಾಗಟದ ನಿರ್ಮೂಲನಕ್ಕೆ ಜಿಲ್ಲಾ ಮಟ್ಟದಲ್ಲಿ ವಿಶೇಷ ಪೊಲೀಸ್ ದಳವನ್ನು ರಚಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಪುತ್ತೂರು ಕೂರ್ನಡ್ಕ ಜುಮಾ ಮಸೀದಿಯ ಖತೀಬ್ ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.
ತುಂಬೆಯ ಬಿ.ಎ. ಮೈದಾನದಲ್ಲಿ ನಿನ್ನೆ ರಾತ್ರಿ ನಡೆದ ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಷನ್ (ರಿ.) ತುಂಬೆ ಇದರ ಆಶ್ರಯದಲ್ಲಿ 'ಮಾದಕ ಬದುಕು ಭಯಾನಕ' ಎಂಬ ಘೋಷಣೆಯೊಂದಿಗೆ ತುಂಬೆಯಾದ್ಯಂತ ಒಂಭತ್ತು ದಿನಗಳ ಕಾಲ ಹಮ್ಮಿಕೊಂಡ 'ಮಾದಕ ವ್ಯಸನದ ವಿರುದ್ಧ ಬ್ರಹತ್ ಜಾಗೃತಿ ಅಭಿಯಾನ'ದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಗಾಂಜ, ಬ್ರೌನ್ ಶುಗರ್ ಸೇರಿದಂತೆ ಮಾದಕ ಪದಾರ್ಥಗಳ ಸಾಗಟ ಹಾಗೂ ವ್ಯಸನದ ಜಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಜಿಲ್ಲೆಯ ಶಾಲಾ - ಕಾಲೇಜು ಕ್ಯಾಂಪಸ್ ಗಳಿಗೆ ನುಸುಳಿಕೊಂಡಿರುವ ಮಾದಕ ಪದಾರ್ಥಗಳಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎಂಬ ಭೇದ ಇಲ್ಲದೆ ಅದರ ದಾಸರಾಗುತ್ತಿದ್ದಾರೆ. ಯುವ ಸಮುದಾಯವನ್ನು ಮಾದಕ ಪದಾರ್ಥಗಳಿಂದ ಮುಕ್ತಗೊಳಿಸಲು ಜಾಗ್ರತಿ ಕಾರ್ಯಕ್ರಮ ನಡೆಯದಿದ್ದರೆ ದೇಶಕ್ಕೆ ಕಂಟಕ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಅವರು ಎಚ್ಚರಿಸಿದರು.
ಗಾಂಜಾ ಸಹಿತ ಮಾದಕ ಪದಾರ್ಥಗಳ ಸಾಗಾಟಗಾರರು ಅದನ್ನು ಸೇವಿಸದೆ ಅಮಾಯಕ ಯುವಕ, ಯುವತಿಯರಿಗೆ ಮಾರಾಟ ಮಾಡಿ ಅದರ ಚಟಕ್ಕೆ ಒಳ ಪಡಿಸುತ್ತಾರೆ. ಆ ಮೂಲಕ ಮಾರಾಟಗಾರರು ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವ ಸಮೂಹ ಈ ದೇಶದ ಸಂಪತ್ತಾಗಿದೆ. ವಿದ್ಯಾರ್ಥಿಗಳು ಹಾಗೂ ಯುವ ಸಮೂಹಕ್ಕೆ ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ವಿಶೇಷ ಪೊಲೀಸ್ ದಳ ಮತ್ತು ಕಠಿಣ ಕಾನೂನಿನ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಕೆಲವು ಪೊಲೀಸ್ ಅಧಿಕಾರಿಗಳು ಮಾದಕ ವಸ್ತುಗಳ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮೃದು ದೋರಣೆ ತಳೆಯುತ್ತಾರೆ ಎಂಬ ಆರೋಪ ಇದೆ. ಅಂತಹ ಪೊಲೀಸರು ಹಣದ ಆಸೆಗಾಗಿ ಬಡ, ಅಮಾಯಕ ಯುವಕರನ್ನು ಮಾದಕ ವಸ್ತುಗಳಿಗೆ ಬಲಿ ಕೊಡುವುದು ದೇಶವನ್ನೇ ಬಲಿ ಕೊಟ್ಟ ಹಾಗೆ ಎಂದ ಅವರು, ಸ್ವಾಮೀಜಿಗಳು, ಮುಸ್ಲಿಮ್, ಕ್ರೈಸ್ತ ಧರ್ಮ ಗುರುಗಳು, ಸಮಾಜಿಕ ನಾಯಕರು, ಯುವಕರು ಧರ್ಮ ಭೇದ ಮರೆತು ಇಂದಿನ ಬ್ರಹತ್ ಸಮಾಜಿಕ ಪಿಡುಗಾದ ಮಾದಕ ಪದಾರ್ಥಗಳ ಜಾಲದ ವಿರುದ್ಧ ಬ್ರಹತ್ ಆಂದೋಲನ ನಡೆಸಬೇಕಾದ ಅಗತ್ಯವಿದೆ ಎಂದರು.
ಮಾದಕ ವ್ಯಸನದ ಕುರಿತು ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಶನ್ ತುಂಬೆಯಾದ್ಯಂತ ಒಂಭತ್ತು ದಿನಗಳ ಕಾಲ ಆಲ್ ಆರ್ಗನೈಸೇಶನ್ ಮೀಟ್, ಬೀದಿ ನಾಟಕ, ಕಿರುಚಿತ್ರ ಪ್ರದರ್ಶನ, ವಿದ್ಯಾರ್ಥಿಗಳ ಜಾಥ, ಕೌನ್ಸಿಲಿಂಗ್, ವುಮೆನ್ಸ್ ಮೀಟ್, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ, ಸಭಾ ಕಾರ್ಯಕ್ರಮಗಳ ಮೂಲಕ ನಡೆಸಿದ ಜಾಗ್ರತಿ ಅಭಿಯಾನ ಪ್ರಶಂಸನೀಯವಾಗಿದೆ ಎಂದು ಅವರು ಶಾಘ್ಲಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಶೇಕಡಾ ವಿದ್ಯಾರ್ಥಿಗಳು ಮಾದಕ ಪದಾರ್ಥಗಳ ವ್ಯಸನದ ಚಟಕ್ಕೆ ಒಳಗಾಗಿದ್ದಾರೆ ಎಂದು ಸಮೀಕ್ಷೆ ಬಹಿರಂಗ ಪಡಿಸಿದೆ. ಪರಿಸ್ಥಿತಿ ಕೈ ಮೀರಿ ಹೋಗುವ ಮೊದಲು ಎಚ್ಚೆತ್ತುಕೊಳ್ಳಬೇಕು. ಅದರ ವಿರುದ್ಧ ನಡೆಯುವ ಜಾಗೃತಿ ಕಾರ್ಯಕ್ರಮದ ಜೊತೆಗೆ ಸಾಗಾಟಕರು ಮತ್ತು ವ್ಯಸನಿಗಳ ನಿರ್ಮೂಲನೆಗೆ ಪೊಲೀಸರು ಶಕ್ತಿ ಮೀರಿ ಶ್ರಮಿಸಬೇಕು ಎಂದು ಅವರು ಪುನರುಚ್ಚರಿಸಿದರು.
ಕಾರ್ಯಕ್ರಮವನ್ನು ಉದ್ಯಾವರ ಸಾವಿರ ಜಮಾಅತ್ ಹಾಗೂ ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಸೈಯದ್ ಅತ್ತಾವುಲ್ಲ ತಂಙಳ್ ಎಂ.ಎ. ದುಅ ಮೂಲಕ ಉದ್ಘಾಟಿಸಿ ಬಳಿಕ ಆರ್ಶಿವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷ ಸಿರಾಜುದ್ದೀನ್ ತುಂಬೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಮಂಗಳೂರು ಇದರ ಹಿರಿಯ ವೈದ್ಯ ಡಾ. ಶ್ರೀನಿವಾಸ್ ಭಟ್ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿ ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್., ಬಿ.ಎ.ಸಮೂಹ ಸಂಸ್ಥೆಯ ನಿರ್ದೇಶಕ ಬಿ.ಅಬ್ದುಲ್ ಸಲಾಂ ಭಾಗವಹಿಸಿದರು.
ತುಂಬೆ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಲತೀಫ್ ಫೈಝಿ ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿ ದುಅ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಅಭಿಯಾನಕ್ಕೆ ಬೀದಿ ನಾಟಕ ತಂಡ ಹಾಗೂ ಕಿರು ಚಿತ್ರ ನೀಡಿ ಸಹಕರಿಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಅಶ್ವನ್ ಸಾದಿಕ್ ಗೆ ಹಾಗೂ ಬೀದಿ ನಾಟಕ ತಂಡದ ಸದಸ್ಯರಿಗೆ ಡಿವೈಎಸ್ಪಿ ರವೀಶ್ ಸಿ.ಆರ್. ಅಭಿನಂದನಾ ಪತ್ರ ವಿತರಿಸಿ ಗೌರವಿಸಿದರು.
ವೇದಿಕೆಯಲ್ಲಿ ತುಂಬೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬೂಬಕ್ಕರ್, ತುಂಬೆ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಮುಹಮ್ಮದ್ ಬಶೀರ್, ತುಂಬೆ ಸುನ್ನಿ ಕಲ್ಚರಲ್ ಸೆಂಟರ್ ಅಧ್ಯಕ್ಷ ಮುಸ್ತಾಕ್ ಮದನಿ, ಫ್ರೆಂಡ್ಸ್ ಗ್ರೂಪ್ ತುಂಬೆ ಅಧ್ಯಕ್ಷ ಬದ್ರುದ್ದೀನ್, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್, ಕ್ರೆಸೆಂಟ್ ಯಂಗ್ ಮೆನ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶೌಹಾನ್ ಅಹ್ಮದ್ ಉಪಸ್ಥಿತರಿದ್ದರು.
ಕ್ರೆಸೆಂಟ್ ಮಾಜಿ ಅಧ್ಯಕ್ಷ ಇಮ್ತಿಯಾಝ್ ಎ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
'ಮಾದಕ ಬದುಕು ಭಯಾನಕ ಅಭಿಯಾನ'ದ ಸಂಚಾಲಕ ಮುಹಮ್ಮದ್ ಇರ್ಫಾನ್ ತುಂಬೆ ಧನ್ಯವಾದಗೈದರು.
ಖಲಂದರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು
. ತುಂಬೆಯ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸಹಕರಿಸಿದರು.







