ಜಿದ್ದಾ: ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್‌ನಿಂದ ಗಣರಾಜ್ಯೋತ್ಸವ ಪ್ರಯುಕ್ತ ಕಬಡ್ಡಿ ಲೀಗ್ - 2017
ಜಿದ್ದಾ , ಜ.9 : ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್, ಜಿದ್ದಾ ಇದರ ವತಿಯಿಂದ ಭಾರತೀಯ ಗಣರಾಜ್ಯೋತ್ಸವದ ಅಂಗವಾಗಿ ಫೆಬ್ರವರಿ 3ರಂದು ಜಿದ್ದಾದ ಶಬಾಬಿಯಾ ಮೈದಾನದಲ್ಲಿ ಕಬಡ್ಡಿ ಲೀಗ್ - 2017 ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ.
ಸೌದಿ ಅರೇಬಿಯಾದ ರಿಯಾದ್, ಜಿದ್ದಾ, ದಮಾಮ್, ಖೋಬರ್ ಹಾಗೂ ಇನ್ನಿತರ ಪ್ರದೇಶಗಳಿಂದ ಸುಮಾರು 16 ತಂಡಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಶ್ರೇಷ್ಠ ಭಾರತವು ಗಣರಾಜ್ಯಗೊಂಡ ಅವಿಸ್ಮರಣೀಯ ಸಂದರ್ಭವನ್ನು ನೆನಪಿಸುವ ಮತ್ತು ಆಚರಿಸುವ ಅವಕಾಶವನ್ನು ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರಿಗೆ ಒದಗಿಸಬೇಕೆಂಬ ನಿಟ್ಟಿನಲ್ಲಿ ಈ ಕಬಡ್ಡಿ ಲೀಗ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ.
ದೇಹ ದಾರ್ಢ್ಯತೆಯ ಪ್ರತೀಕವಾದ ಭಾರತದ ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಪ್ರಚುರಪಡಿಸಬೇಕೆಂಬ ಉದ್ದೇಶದಿಂದ ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ಗಣರಾಜ್ಯೋತ್ಸವ ಆಚರಣೆಗೆ ಕಬಡ್ಡಿಯನ್ನು ಆಯ್ಕೆ ಮಾಡಿದೆ.
ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ಜಿದ್ದಾದಲ್ಲಿರುವ ಅನಿವಾಸಿ ಭಾರತೀಯರನ್ನೊಳಗೊಂಡ ಒಂದು ಒಕ್ಕೂಟವಾಗಿದೆ. ಸೌದಿ ಅರೇಬಿಯಾದಲ್ಲಿರುವ ಅನಿವಾಸಿ ಭಾರತೀಯರ ಮಧ್ಯೆ ಭಾರತೀಯ ಕ್ರೀಡೆ ಮತ್ತು ವ್ಯಾಯಾಮಗಳನ್ನು ಹರಡುವ ಪ್ರಮುಖ ಉದ್ದೇಶವನ್ನು ಫೆಡರೇಶನ್ ಹೊಂದಿದೆ. ಅನಿವಾಸಿ ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದು, ಅನಿವಾಸಿ ಭಾರತೀಯ ವಿದ್ಯಾರ್ಥಿಗಳಲ್ಲಿ ಭಾರತೀಯ ಕ್ರೀಡೆಗಳ ಕುರಿತ ಒಲವುಂಟುಮಾಡುವುದು, ಕ್ರೀಡಾ ಪ್ರತಿಭೆಗಳಿಗೆ ಮನ್ನಣೆ ನೀಡುವುದು ಮುಂತಾದ ಹಲವು ಉದ್ದೇಶಗಳನ್ನು ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್ ಹೊಂದಿದೆ.
8 ಜನವರಿ 2017ರಂದು ಜಿದ್ದಾದ ಪ್ರಧಾನ ರಾಜತಾಂತ್ರಿಕ ಮಹಮ್ಮದ್ ರಹ್ಮಾನ್ ನೂರ್ ಶೈಖ್‌ರನ್ನು ಭೇಟಿಯಾಗಿರುವ ಎನ್‌ಆರ್‌ಐ ಸ್ಪೋರ್ಟ್ಸ್ ಫೆಡರೇಶನ್‌ನ ನಿಯೋಗವೊಂದು ಕಬಡ್ಡಿ ಲೀಗ್‌ಗೆ ಅವರ ಸಹಕಾರವನ್ನು ಕೋರಿದೆ.







