ನರ್ಸ್‌ಗೆ ವಂಚಿಸಿ ಲೈಂಗಿಕ ದೌರ್ಜನ್ಯ
ಪ್ರಮುಖ ಆರೋಪಿ ಸೇರಿ ಮೂವರ ಬಂಧನ
ಶಿವಮೊಗ್ಗ, ಜ.9: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ನರ್ಸ್ ಒಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿ, ಲೈಂಗಿಕ ಕ್ರಿಯೆಯ ವೀಡಿಯೊ ತೆಗೆದು ಬ್ಲಾಕ್‌ಮೇಲ್ ಮಾಡುತ್ತಿದ್ದ ತಂಡವನ್ನು ಭೇದಿಸಿರುವ ಶಿವಮೊಗ್ಗ ಪೊಲೀಸರು ಪ್ರಮುಖ ಆರೋಪಿ ಸಹಿತ ಮೂವರನ್ನು ಸೋಮವಾರ ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಗಾಡಿಕೊಪ್ಪದ ಪ್ರಕಾಶ್‌ಗೌಡ(40), ಈತನಿಗೆ ಸಹಕಾರ ನೀಡಿದ್ದ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದ ನರೇಂದ್ರ (45), ವಿಜೇಶ್(38) ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ಸದಾಶಿವ(42) ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಕೆಲದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ನರ್ಸ್ ಒಬ್ಬರನ್ನು ಆರೋಪಿ ಪ್ರಕಾಶ್‌ಗೌಡ ಎಂಬಾತ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದ. ಅಲ್ಲದೆ, ದೈಹಿಕ ಸಂಪರ್ಕದ ವೀಡಿಯೊ ಚಿತ್ರೀಕರಿಸಿದ್ದ. ಬಳಿಕ ದೈಹಿಕ ಸಂಪರ್ಕದ ವೀಡಿಯೊವನ್ನು ಅಂತರ್ಜಾಲ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ತಾನು ಹೇಳಿದ ಜನರೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಪ್ರಕಾಶ್ ಗೌಡನ ಬೆದರಿಕೆಗೆ ಕುಗ್ಗಿದ ನರ್ಸ್ ಆತ ಹೇಳಿದಂತೆ ನಡೆದು ಕೊಳ್ಳುತ್ತಿದ್ದಳು ಎನ್ನಲಾಗಿದೆ. ಈ ಬಗ್ಗೆ ನರ್ಸ್ ಪೊಲೀಸರ ಗಮನಕ್ಕೆ ತಂದಿದ್ದರು ಎಂದು ತಿಳಿದು ಬಂದಿದೆ.
ಅಲ್ಲದೆ, ಮತ್ತೊಂದೆಡೆ ನರ್ಸ್‌ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಯೊಬ್ಬರಿಗೆ ಸಿ.ಸಿ ಕ್ಯಾಮರಾದಲ್ಲಿ ಚಿತ್ರೀಕರಿಸಿಕೊಂಡಿರುವ ವೀಡಿಯೊ ಬಹಿರಂಗಪಡಿಸುವ ಬೆದರಿಕೆ ಹಾಕಿರುವ ವಂಚಕರ ತಂಡ ಲಕ್ಷಾಂತರ ರೂ. ಸುಳಿದಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.
ಪ್ರಕರಣ ಸಂಬಂಧ ಕಾರ್ಯಾಚರಣೆ ಆರಂಭಿಸಿದ ಶಿವಮೊಗ್ಗ ಪೊಲೀಸರು, ಸೋಮವಾರ ಪ್ರಮುಖ ಆರೋಪಿ ಪ್ರಕಾಶ್‌ಗೌಡ ಸಹಿತ ನರೇಂದ್ರ ಮತ್ತು ವಿಜೆೀಶ್ ಎಂಬವರನ್ನು ಬಂಧಿಸಿದ್ದಾರೆ. ಆದರೆ, ಮತ್ತೋರ್ವ ಆರೋಪಿ ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯ ಸದಾಶಿವ ತಲೆ ಮರೆಸಿ ಕೊಂಡಿದ್ದು, ಆತನ ಬಂಧನಕ್ಕೂ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ಹೆಚ್ಚುತ್ತಿದೆ ‘ಅಶ್ಲೀಲ-ವೀಡಿಯೊ-ಬ್ಲ್ಯಾಕ್‌ಮೇಲ್ ಪ್ರಕರಣಗಳು:
ಜಿಲ್ಲೆಯಲ್ಲಿ ‘ಅಶ್ಲೀಲ-ವೀಡಿಯೋ-ಬ್ಲ್ಯಾಕ್ ಮೇಲ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗಷ್ಟೆ ವಿದ್ಯಾರ್ಥಿ ಯೋರ್ವ ವಿದ್ಯಾರ್ಥಿನಿಯೋರ್ವಳೊಂದಿಗೆ ನಡೆಸಿದ ಲೈಂಗಿಕ ದೌರ್ಜನ್ಯದ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಅದನ್ನು ಬಹಿರಂಗಗೊಳಿಸುವ ಬೆದರಿಕೆ ಹಾಕಿ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಪ್ರಕರಣವೂ ಬೆಳಕಿಗೆ ಬಂದಿತ್ತು.
ಶಂಕೆ
ಯುವತಿಯರನ್ನು ಪ್ರೀತಿ ಪ್ರೇಮದಲ್ಲಿ ಸಿಲುಕಿಸಿ ಕೊಂಡು ‘ಅಶ್ಲೀಲ ವೀಡಿಯೊ ಬ್ಲ್ಯಾಕ್ ಮೇಲ್’ ದಂಧೆಯನ್ನು ನಡೆಸುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಸಾರ್ವಜನಿಕರು, ಈ ದಂಧೆಯಲ್ಲಿ ಹಲವು ಮಂದಿಯ ತಂಡ ಕಾರ್ಯಾಚರಿಸುವ ಸಂಶಯ ವ್ಯಕ್ತ ಪಡಿಸಿದ್ದಾರೆ.
ವೇಶ್ಯಾವಾಟಿಕೆಗೆ ಬಳಕೆ ಪ್ರೀತಿ, ಪ್ರೇಮದ ನೆಪವೊಡ್ಡಿ ಯುವತಿಯರನ್ನು ಖೆಡ್ಡಾಕ್ಕೆ ಬೀಳಿಸುತ್ತಿರುವ ತಂಡ ‘ಅಶ್ಲೀಲ- ವೀಡಿಯೊ-ಬ್ಲ್ಯಾಕ್ ಮೇಲ್’ ತಂತ್ರಗಾರಿಕೆ ಬಳಸಿಕೊಂಡು ಯುವತಿಯರಿಂದ ಬಲಾತ್ಕಾರವಾಗಿ ವೇಶ್ಯಾವಾಟಿಕೆ ದಂಧೆ ನಡೆಸುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.







