ಅಪಘಾತದ ಗಾಯಾಳುಗಳಿಗೆ ನೆರವು ನೀಡಿದವರಿಗೆ ‘‘ಜೀವರಕ್ಷಕ ಪ್ರಶಸ್ತಿ’’
ಚಿಕ್ಕಮಗಳೂರು, ಜ.9: ರಾಜ್ಯ ಸರಕಾರವು ನೂತನವಾಗಿ ಜಾರಿಗೊಳಿಸಿರುವ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯ ವತಿಯಿಂದ ರಾಜ್ಯದ ವ್ಯಾಪ್ತಿಯಲ್ಲಿ ಘಟಿಸಿದ ರಸ್ತೆ ಅಪಘಾತದ ಯಾವುದೇ ಗಾಯಾಳುಗಳಿಗೆ 48 ಗಂಟೆಗಳವರೆಗೆ ಗರಿಷ್ಠ ರೂ.25,000ವರೆಗೆ ಉಚಿತ ತುರ್ತು ಚಿಕಿತ್ಸೆ ಒದಗಿಸಲಾಗುತ್ತಿದೆ.
ಈ ಯೋಜನೆಯು 2016 ಮಾ.8ರಿಂದ ಜಾರಿಯಲ್ಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳ್ಳುತ್ತಿದೆ. 2015ರ ರಸ್ತೆ ಅಪಘಾತದ ಸಮೀಕ್ಷೆಯು ತಿಳಿಸುವಂತೆ ಅಪಘಾತ ಹಾಗೂ ಸಾವುಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವು ದೇಶದ 3ನೆ ರಾಜ್ಯವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಲ್ಲಿ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದೊಂದು ಲೋಕೋಪಕಾರ ಯೋಜನೆಯಾಗಿದ್ದು, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿರುತ್ತದೆ. ಜನರ ಭಾಗಿತ್ವವಿಲ್ಲದೆ ಈ ಯೋಜನೆ ಯಶಸ್ವಿಗೊಳಿಸುವುದು ಸಾಧ್ಯವಿಲ್ಲ.
ಆದ್ದರಿಂದ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಹಾಗೂ ಅಪಘಾತದಂತಹ ಸಂಕಷ್ಟದ ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ಒದಗಿಸಲು ಹಾಗೂ ಜೀವ ಉಳಿಸಲು ನೆರವಾಗುವ ದಯಾಳುಗಳಿಗೆ ಸ್ಪಂದನೆ ನೀಡುವ, ಪರೋಪಕಾರಿಗಳಿಗೆ ಜೀವ ರಕ್ಷಕ ಪ್ರಶಸ್ತಿ ನೀಡುವ ಮೂಲಕ ಅಂತಹ ಲೋಕೋಪಕಾರಿಗಳನ್ನು ಗೌರವಿಸುವುದು ಅತ್ಯಂತ ಸೂಕ್ತವಿದ್ದು, ಅದಕ್ಕಾಗಿ ಜೀವ ರಕ್ಷಕ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
ಈ ಪ್ರಶಸ್ತಿಯನ್ನು ಸ್ಥಾಪಿಸುವ ಬಹುಮುಖ್ಯ ಉದ್ದೇಶವೆಂದರೆ ಅಪಘಾತದ ಸಂದರ್ಭದಲ್ಲಿ ಸ್ಥಳದಲ್ಲಿ ಲಭ್ಯವಿರುವ ವ್ಯಕ್ತಿಗಳು ಯಾವುದೇ ವಿಳಂಬವಿಲ್ಲದೆ ಗಾಯಾಳುಗಳನ್ನು ರಕ್ಷಿಸಲು ತಕ್ಷಣವೇ ಆಸ್ಪತ್ರೆಗಳಿಗೆ ಸಾಗಿಸುವುದು ಹಾಗೂ ಚಿಕಿತ್ಸೆ ಕೊಡಿಸಲು ನೆರವಾಗುವುದು ಮುಂತಾದ ಕಾರ್ಯಗಳನ್ನು ನಿರ್ವಹಿಸುವಂತೆ ಪ್ರೋತ್ಸಾಹಿಸುವುದಾಗಿದೆ.
ಈ ರೀತಿ ಸಹಾಯ ನೀಡಿದ ದಯಾಳುಗಳು ಅಥವಾ ಉಪಕಾರಿ ವ್ಯಕ್ತಿಗಳನ್ನು ಗುರುತಿಸಿ ಈ ಅತ್ಯುನ್ನತ ಮಟ್ಟದ ಜೀವರಕ್ಷಕ ಪ್ರಶಸ್ತಿಯನ್ನು ನೀಡಲಾಗುವುದು. ಯಾವುದೇ ಬಹುಮಾನ ಅಥವಾ ಲಾಭದ ನಿರೀಕ್ಷೆಗಳಿಲ್ಲದೆ, ವಿಶೇಷ ಸಂಬಂಧಗಳಿಲ್ಲದೆ ಸ್ವಯಂಪ್ರೇರಿತರಾಗಿ ಬಂದು ಅಪಘಾತದ ಗಾಯಾಳುಗಳಿಗೆ ನೆರವಾಗುವ ಅಥವಾ ಸಹಾಯ ಮಾಡುವ ದಯಾಳು ಹಾಗೂ ಉಪಕಾರಿ ವ್ಯಕ್ತಿ ಈ ಪ್ರಶಸ್ತಿಗೆ ಅರ್ಹರಾಗಿದ್ದಾರೆ.







