ಮಾರ್ಚ್ 9ರಿಂದ ಸಿಬಿಎಸ್‌ಇ 10, 12ನೆ ತರಗತಿ ಪರೀಕ್ಷೆ
ಹೊಸದಿಲ್ಲಿ,ನ.9: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯ 10ನೆ ಹಾಗೂ 12ನೆ ತರಗತಿಯ ಪರೀಕ್ಷೆಗಳು ಮಾರ್ಚ್ 9ರಿಂದ ನಡೆಯಲಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಕ್ತಾಯಗೊಂಡ ಒಂದು ದಿನದ ಬಳಿಕ ಈ ಪರೀಕ್ಷೆಗಳು ಆರಂಭಗೊಳ್ಳಲಿವೆಯೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.
10ನೆ ತರಗತಿಯ ಸಿಬಿಎಸ್‌ಇ ಪರೀಕ್ಷೆಗಳು ಎಪ್ರಿಲ್ 10ರಂದು ಕೊನೆಗೊಳ್ಳಲಿದ್ದು, ಅವುಗಳಿಗೆ ಒಟ್ಟು 16,67,573 ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ. 12ನೆ ತರಗತಿಯ ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಗಳು ಎಪ್ರಿಲ್ 29ರಂದು ಮುಗಿಯಲಿದ್ದು, ಒಟ್ಟು 10,98,420 ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ.
ಸಾಮಾನ್ಯವಾಗಿ ಸಿಬಿಎಸ್‌ಇ 10ನೆ ಹಾಗೂ 12ನೆ ತರಗತಿಯ ವಾರ್ಷಿಕ ಪರೀಕ್ಷೆಗಳು ಮಾರ್ಚ್ 1ರಿಂದ ಆರಂಭವಾಗುತ್ತಿದ್ದವು. ಆದರೆ ಈ ಬಾರಿ ಪಂಜಾಬ್,ಗೋವಾ, ಮಣಿಪುರ, ಉತ್ತರಾಖಂಡ ಹಾಗೂ ಉತ್ತರಪ್ರದೇಶಗಳಲ್ಲಿ ವಿಧಾನಸಭಾ ಚುನಾವಣೆಗಳು ಮುಂದಿನ ತಿಂಗಳಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ನಿರ್ಧರಿಸಿತ್ತು.





