ಏರ್ ಇಂಡಿಯಾಗೆ ವಿಶ್ವದಲ್ಲೇ ಮೂರನೇ ಸ್ಥಾನ. ಅತ್ಯಂತ.....

ಹೊಸದಿಲ್ಲಿ,ಜ.9: ವಿಮಾನ ಯಾವುದಾದರೇನು...ಪ್ರಯಾಣಿಸುವುದು ಮುಖ್ಯ ಎನ್ನುವವರಿಗೊಂದು ಕಿವಿಮಾತು. ಪ್ರಯಾಣವೊಂದೇ ಮುಖ್ಯವಲ್ಲ...ನೀವು ಯಾವ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸುತ್ತೀರಿ ಎನ್ನುವುದು ಇನ್ನೂ ಮುಖ್ಯವಾಗುತ್ತದೆ.
ವಿವಿಧ ಸಂಸ್ಥೆಗಳ ವಿಮಾನಗಳಲ್ಲಿ ಕ್ಯಾಬಿನ್ ವ್ಯವಸ್ಥೆ ಮತ್ತು ಸೇವಾ ಗುಣಮಟ್ಟಗಳಲ್ಲಿ ವ್ಯತ್ಯಾಸದ ಜೊತೆಗೆ ನಿಮ್ಮ ಯಾನ ಎಷ್ಟು ವಿಳಂಬಗೊಳ್ಳುವ ಸಾಧ್ಯತೆಯಿದೆ ಎನ್ನುವದೂ ಅಗತ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯವಾಗಿದೆ. ತಪ್ಪು ಆಯ್ಕೆಯನ್ನು ಮಾಡಿಕೊಂಡರೆ ನಿಗದಿತ ಸಮಯದ ಶೇ.55ರವರೆಗೂ ಪ್ರಯಾಣ ವಿಳಂಬವಾಗಬಹುದು. ಸರಿಯಾದ ವಿಮಾನವನ್ನು ಹತ್ತಿದರೆ ಪ್ರಯಾಣದಲ್ಲಿ ವಿಳಂಬ ಸಾಧ್ಯತೆ ಕೇವಲ ಶೇ.11ಕ್ಕೆ ತಗ್ಗಬಹುದು. ಈ ನಿಟ್ಟಿನಲ್ಲಿ ವಿಶ್ವಾದ್ಯಂತದ ವಿಮಾನಯಾನ ಸಂಸ್ಥೆಗಳ ಬಗ್ಗೆ ಮಾಹಿತಿಗಳನ್ನು ಕ್ರೋಢೀಕರಿಸುವ ಅಮೆರಿಕದ ‘ಫ್ಲೈಟ್‌ಸ್ಟಾಟ್ಸ್ ’ನೆರವಾಗಬಲ್ಲದು.
‘ಫ್ಲೈಟ್‌ಸ್ಟಾಟ್ಸ್’ಪ್ರತಿವರ್ಷ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಗಳ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಅವುಗಳನ್ನು ಸಂಕಲಿಸಿ ಪ್ರಯಾಣದ ಸಮಯ ಪಾಲನೆಗೆ ಸಂಬಂಧಿಸಿದಂತೆ ಅತ್ಯುತ್ತಮ ಮತ್ತು ಅತಿಕೆಟ್ಟ ವಿಮಾನಯಾನ ಸಂಸ್ಥೆಗಳನ್ನೊಳಗೊಂಡ ಪಟ್ಟಿಯನ್ನು ಬಿಡುಗಡೆಗೊಳಿಸುತ್ತದೆ.
2016ನೇ ಸಾಲಿಗೆ ಸಂಸ್ಥೆಯು ಪ್ರಕಟಿಸಿರುವ ಪಟ್ಟಿಯಲ್ಲಿ ನಮ್ಮ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ಆದರೆ ಆ ಪಟ್ಟಿ ಮಾತ್ರ ವಿಶ್ವದ ಅತ್ಯಂತ ಕೆಟ್ಟ 10 ವಿಮಾನಯಾನ ಸಂಸ್ಥೆಗಳದ್ದು! ಇಸ್ರೇಲ್‌ನ ಇಐ ಎಐ ಶೇ.56 ವಿಳಂಬ ಸಾಧ್ಯತೆಯೊಡನೆ ವಿಶ್ವದ ಅತ್ಯಂತ ಕೆಟ್ಟ ವಿಮಾನಯಾನ ಸಂಸ್ಥೆಯಾಗಿದ್ದರೆ, ಐಸ್‌ಲ್ಯಾಂಡ್ ಏರ್(ಶೇ.41.05) ನಂತರದ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಏರ್ ಇಂಡಿಯಾದ ವಿಮಾನಗಳಲ್ಲಿ ಪ್ರಯಾಣಿಸಿದರೆ ವಿಳಂಬದ ಸಾಧ್ಯತೆ ಶೇ.38.71ರಷ್ಟು ಎನ್ನುತ್ತದೆ ‘ಫ್ಲೈಟ್‌ಸ್ಟಾಟ್ಸ್ ’
ನೆದರ್‌ಲ್ಯಾಂಡ್‌ನ ಕೆಎಲ್‌ಎಂ(ಶೇ.11.47), ಸ್ಪೇನ್‌ನ ಇಬೆರಿಯಾ(ಶೇ.11.82) ಮತ್ತು ಜಪಾನಿನ ಜೆಎಎಲ್(ಶೇ.12.2) ವಿಶ್ವದ 10 ಅತ್ಯುತ್ತಮ ವಿಮಾನಯಾನ ಸಂಸ್ಥೆಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿವೆ.







