ಜಲ್ಲಿಕಟ್ಟು ನಿಷೇಧಿಸುವುದಾದರೆ ಬಿರಿಯಾನಿಯನ್ನೂ ಬಿಡಿ: ಕಮಲ್ ಹಾಸನ್
ಚೆನ್ನೈ,ಜ.9: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಗೂಳಿ ಕ್ರೀಡೆಯ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳುವಂತೆ ಇಲ್ಲಿ ಬಲವಾಗಿ ಪ್ರತಿಪಾದಿಸಿದ ಖ್ಯಾತ ನಟ ಕಮಲ್ ಹಾಸನ್, ಜಲ್ಲಿಕಟ್ಟು ಕ್ರೀಡೆ ಪ್ರಾಣಿಗಳ ಪಾಲಿಗೆ ಕ್ರೌರ್ಯವಾಗಿದೆ ಎಂದು ಭಾವಿಸುವವರು ಬಿರಿಯಾನಿ ತಿನ್ನುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಇಂದು ಆರಂಭಗೊಂಡ ಇಂಡಿಯಾ ಟುಡೇ ಸೌತ್ ಕಾಂಕ್ಲೇವ್ 2017ರಲ್ಲಿ ಪಾಲ್ಗೊಂಡಿದ್ದ ಸಂದರ್ಭ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕಮಲ್ ಅವರು, ‘‘ಜಲ್ಲಿಕಟ್ಟು ಕ್ರೀಡೆ ರಾಜ್ಯದ ಸಾಂಪ್ರದಾಯಿಕ ಸಂಸ್ಕೃತಿಯ ಭಾಗವಾಗಿದೆ. ಜಲ್ಲಿಕಟ್ಟು ನಿಷೇಧವನ್ನು ನೀವು ಬಯಸುತ್ತೀರಾದರೆ ಬಿರಿಯಾನಿಯನ್ನೂ ನಿಷೇಧಿ ಸೋಣ. ನಾನೂ ಜಲ್ಲಿಕಟ್ಟು ಅಭಿಮಾನಿಯಾಗಿದ್ದೇನೆ. ಹಿಂದೆ ಹಲವಾರು ಬರಿ ಈ ಕ್ರೀಡೆಯಲ್ಲಿ ಭಾಗವಹಿಸಿದ್ದೇನೆ’’ ಎಂದು ಹೇಳಿದರು.
ಜಲ್ಲಿಕಟ್ಟು ಪ್ರಾಣಿಗಳ ಪಾಲಿಗೆ ಕ್ರೌರ್ಯವಾಗಿದೆ ಎಂದು ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು 2014ರಲ್ಲಿ ಈ ಕ್ರೀಡೆಯನ್ನು ನಿಷೇಧಿಸಿತ್ತು. ಅಲ್ಲಿಂದೀಚೆಗೆ ಈ ಕ್ರೀಡೆಯ ಪುನರಾರಂಭದ ಮಹತ್ವ ಕುರಿತು ಕಮಲ್ ಹಲವಾರು ಬಾರಿ ಧ್ವನಿಯೆತ್ತಿದ್ದಾರೆ.
ಸ್ಪೇನಿನ ಗೂಳಿ ಕಾಳಗ ಮತ್ತು ಜಲ್ಲಿಕಟ್ಟು ನಡುವೆ ಯಾವುದೇ ಹೋಲಿಕೆಯಿಲ್ಲ ಎಂದು ಹೇಳಿದ ಅವರು, ಸ್ಪೇನ್‌ನ ಕ್ರೀಡಾ ಉತ್ಸವದಲ್ಲಿ ಗೂಳಿಗಳನ್ನು ಗಾಯಗೊಳಿಸಲಾಗುತ್ತದೆ, ಅವುಗಳನ್ನು ಕೊಲ್ಲಲಾಗುತ್ತದೆ. ಆದರೆ ತಮಿಳು ನಾಡಿನಲ್ಲಿ ಅವುಗಳನ್ನು ದೇವರಂತೆ ಪರಿಗಣಿಸಲಾಗುತ್ತದೆ. ಜಲ್ಲಿಕಟ್ಟು ಕ್ರೀಡೆ ಗೂಳಿಗಳನ್ನು ಪಳಗಿಸುವುದನ್ನು ಒಳಗೊಂಡಿದೆಯೇ ಹೊರತು ಅವುಗಳಿಗೆ ದೈಹಿಕ ಹಿಂಸೆಯನ್ನು ನೀಡಲಾಗುವುದಿಲ್ಲ ಎಂದರು.





