ನೋಟು ರದ್ದತಿಯ ಸಂಕಷ್ಟಗಳಿಂದ ಜನರನ್ನು ರಕ್ಷಿಸುವಂತೆ ರಾಷ್ಟ್ರಪತಿಗೆ ಮಮತಾ ಆಗ್ರಹ
ಬರ್ದ್ವಾನ್,ಜ.9: ನೋಟು ರದ್ದತಿಯ ಸಂಕಷ್ಟಗಳಿಂದ ಮತ್ತು ನಗದು ಬಿಕ್ಕಟ್ಟಿನಿಂದ ದೇಶದ ಜನರನ್ನು ರಕ್ಷಿಸುವಂತೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಆಗ್ರಹಿಸಿದರು. ತನ್ನ ಟಿಎಂಸಿ ಪಕ್ಷವನ್ನು ಬಲಿಪಶುವನ್ನಾಗಿಸಲು ಸಿಬಿಐ ಬಳಕೆಯಾಗುತ್ತಿದೆ ಎಂದು ಇದೇ ವೇಳೆ ಅವರು ಪ್ರತಿಪಾದಿಸಿದರು.
ಇಲ್ಲಿ ‘ಮಾಟಿ ಉತ್ಸವ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರವೊಂದು ತನ್ನ ನಿರಂಕುಶತೆಯಿಂದ ದೇಶವನ್ನು ವಿನಾಶದ ಅಂಚಿಗೆ ತಳ್ಳಿದಾಗ ಸಂವಿಧಾನದ ರಕ್ಷಕರಾಗಿ ಜನರಿಗೆ ರಕ್ಷಣೆ ನೀಡುವಂತೆ ಮತ್ತು ಜನರನ್ನು ಉಳಿಸುವಂತೆ ದೇಶದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಷ್ಟ್ರಪತಿಯವರನ್ನು ತಾನು ಆಗ್ರಹಿಸುತ್ತೇನೆ ಎಂದರು.
ಪ್ರತಿಭಟಿಸಲು ಎದ್ದೇಳುವಂತೆ ಜನಸಾಮಾನ್ಯರಿಗೆ ಕರೆ ನೀಡಿದ ಅವರು, ಕೊಂಚ ತೊಂದರೆಯಾಗಬಹುದು. ಆದರೆ ಯಾರಾದರೊಬ್ಬರು ಬೆಕ್ಕಿಗೆ ಗಂಟೆ ಕಟ್ಟಲೇಬೇಕು. ತೃಣಮೂಲ ಕಾಂಗ್ರೆಸ್ ಆ ಕೆಲಸವನ್ನು ಮಾಡಲಿದೆ ಎಂದರು. ಇದಕ್ಕೂ ಮುನ್ನ ಸರಣಿ ಟ್ವೀಟ್‌ಗಳಲ್ಲಿ ಮಮತಾ, ಕೇಂದ್ರವು ಆಗಾಗ್ಗೆ ಹೇರಿರುವ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.
ನೋಟು ರದ್ದತಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದಕ್ಕಾಗಿ ತನ್ನ ಪಕ್ಷವನ್ನು ಮತ್ತು ಅದರ ನಾಯಕರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಇದಕ್ಕಾಗಿ ಸಿಬಿಐನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರವು ಅದನ್ನು ‘ಕಾನ್‌ಸ್ಪಿರಸಿ ಬ್ಯೂರೊ ಆಫ್ ಇಂಡಿಯಾ’ವನ್ನಾಗಿ ಮಾಡಿದೆ ಎಂದು ರೋಸ್ ವ್ಯಾಲಿ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪಕ್ಷದ ಸಂಸದರಾದ ತಪಸ್ ಪಾಲ್ ಮತ್ತು ಸುದೀಪ್ ಬಂಡೋಪಾಧ್ಯಾಯ ಅವರ ಬಂಧನವನ್ನು ಪ್ರಸ್ತಾಪಿಸಿ ಹೇಳಿದರು.





