ಹೆಚ್ಚಿನ ಪರೀಕ್ಷೆ ನಡೆಸದೆ ಹೊಸ ಟಿಬಿ ಔಷಧಿಯನ್ನು ರೋಗಿಗೆ ನೀಡಲಾಗದು
ಉಚ್ಚ ನ್ಯಾಯಾಲಯದಲ್ಲಿ ನಿವೇದನೆ
ಹೊಸದಿಲ್ಲಿ,ಜ.9: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯು ತಯಾರಿಸಿರುವ ಹೊಸ ಕ್ಷಯರೋಗ ಔಷಧಿ ‘ಬೆಡಾಕ್ವಿಲೈನ್’ ಅನ್ನು ಹೆಚ್ಚಿನ ಪರೀಕ್ಷೆಗೊಳಪಡಿಸದೆ ಔಷಧಿಗಳಿಗೆ ಪ್ರತಿರೋಧ ಹೊಂದಿರುವ ಕ್ಷಯರೋಗಿಗೆ ನೀಡಲಾಗದು ಎಂದು ನಗರದ ಲಾಲಾ ರಾಮ ಸ್ವರೂಪ್ ಕ್ಷಯರೋಗ ಆಸ್ಪತ್ರೆಯು ಸೋಮವಾರ ದಿಲ್ಲಿ ಉಚ್ಚನ್ಯಾಯಾಲಯದಲ್ಲಿ ನಿವೇದಿಸಿಕೊಂಡಿದೆ. ತನ್ನ ಪ್ರಮಾಣಪತ್ರದಲ್ಲಿ ಆಸ್ಪತ್ರೆಯು ಈ ವಿಷಯವನು ತಿಳಿಸಿದ್ದು, ಔಷಧಿಯನ್ನು ರೋಗಿಗೆ ಲಭ್ಯವಾಗಿಸಬಹುದೇ ಎನ್ನುವ ಬಗ್ಗೆ ಕೇಂದ್ರವು ತನ್ನ ಪ್ರಮಾಣಪತ್ರವನ್ನು ಇನ್ನೂ ಸಲ್ಲಿಸದ ಹಿನ್ನೆಲೆಯಲ್ಲಿ ನ್ಯಾ.ಸಂಜೀವ ಸಚದೇವ್ ಅವರು ವಿಚಾರಣೆಯನ್ನು ಜ.11ಕ್ಕೆ ನಿಗದಿಗೊಳಿಸಿದರು.
ಬೆಡಾಕ್ವಿಲೈನ್ ಅನ್ನು ಆಸ್ಪತ್ರೆಗೆ ಪೂರೈಸುವ ಸರಕಾರದ ಕಟ್ಟುನಿಟ್ಟಾದ ಮಾರ್ಗಸೂಚಿಗಳು ಮತ್ತು ನೀತಿಯಂತೆ ಈ ಔಷಧಿಯನ್ನು ಇತರ ಯಾವುದೋ ವೈದ್ಯರು ರೋಗಿಗೆ ನೀಡಲು ಲಭ್ಯವಾಗಿಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯು ತನ್ನ ಪ್ರಮಾಣಪತ್ರದಲ್ಲಿ ತಿಳಿಸಿದೆ.
ಬೆಡಾಕ್ವಿಲೈನ್ ಜೊತೆಗೆ ಯಾವ ಔಷಧಿಯನ್ನು ಸೇರಿಸಿ ಕೊಡಬಹುದೆಂದು ನಿರ್ಧರಿಸಲು ರೋಗಿಯ ಎಂಜಲಿನ ಇನ್ನಷ್ಟು ಪರೀಕ್ಷೆಗಳು ಅಗತ್ಯವಾಗಿವೆ ಎಂದೂ ಅದು ಹೇಳಿದೆ.
ಅರ್ಜಿದಾರ ಕೌಶಲ್ ತ್ರಿಪಾಠಿ ಅವರು, ತನ್ನ 18ರ ಹರೆಯದ ಪುತ್ರಿ ಕ್ಷಯರೋಗದಿಂದ ನರಳುತ್ತಿದ್ದು, ಹೊಸ ಔಷಧಿಯೊಂದೇ ಆಕೆಯನ್ನು ಉಳಿಸಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ. ಹೆಚ್ಚಿನ ಪರೀಕ್ಷೆಗಳನ್ನು ನಡೆಸದೆ ಬೆಡಾಕ್ವಿಲೈನ್ ಅನ್ನು ರೋಗಿಗೆ ನೀಡಬಹುದೇ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಾಲಯವು ಜ.4ರಂದು ಆಸ್ಪತ್ರೆಗೆ ಸೂಚಿಸಿತ್ತು. ನೂತನ ಔಷಧಿಯು ದೇಶಾದ್ಯಂತ ಆರು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ಕಂಪೆನಿಯು ಆರೋಗ್ಯ ಕಾರ್ಯ ಕ್ರಮವೊಂದರಡಿ ಇದನ್ನು ಸೀಮಿತ ಪ್ರಮಾಣದಲ್ಲಿ ಕೇಂದ್ರ ಸರಕಾರಕ್ಕೆ ಪೂರೈಸುತ್ತಿದೆ ಎಂದೂ ತ್ರಿಪಾಠಿ ಅರ್ಜಿಯಲ್ಲಿ ತಿಳಿಸಿದ್ದಾರೆ.







