ಕಾಶ್ಮೀರ: ಮೃತರ ಕುಟುಂಬಗಳಿಗೆ ಸರಕಾರದಿಂದ ಐದು ಲ.ರೂ. ಪರಿಹಾರ
ಜಮ್ಮು,ಜ.9: ಕಳೆದ ವರ್ಷ ರಾಜ್ಯದಲ್ಲಿ ಭುಗಿಲೆದ್ದಿದ್ದ ಅಶಾಂತಿಯಲ್ಲಿ ಪೊಲೀಸರ ಗುಂಡೇಟಿನಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ಮತ್ತು ಒಂದು ಸರಕಾರಿ ಉದ್ಯೋಗವನ್ನು ನೀಡುವುದಾಗಿ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಸೋಮವಾರ ಜಮ್ಮುವಿನ ವಿಧಾನಸಭೆಯಲ್ಲಿ ಪ್ರಕಟಿಸಿದರು.
ಭದ್ರತಾ ಸಿಬ್ಬಂದಿಯಿಂದ ಪೆಲೆಟ್‌ಗಳ ಬಳಕೆಯಿಂದ ಕಣ್ಣಿನ ದೃಷ್ಟಿ ಕಳೆದುಕೊಂಡವರಿಗೂ ಉದ್ಯೋಗ ಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಅಶಾಂತಿಯಲ್ಲಿ 90ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆಂದು ಅನಧಿಕೃತ ವರದಿಗಳು ತಿಳಿಸಿವೆ. ಆದರೆ 76 ಜನರು ಮೃತರಾಗಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪೆಲೆಟ್‌ಗಳಿಂದ 1,000ಕ್ಕೂ ಅಧಿಕ ಜನರಿಗೆ ಕಣ್ಣುಗಳಿಗೆ ಗಾಯಗಳಾಗಿದ್ದು, 300ಕ್ಕೂ ಅಧಿಕ ಜನರ ಕಣ್ಣುಗಳಿಗೆ ತೀವ್ರ ಹಾನಿಯಾಗಿದೆ.
ಭದ್ರತಾ ಪಡೆಗಳಿಂದ ಅತಿಯಾದ ಬಲ ಪ್ರಯೋಗ ಕುರಿತು ವಿಚಾರಣೆಗಾಗಿ ಜಿಲ್ಲಾ ಮಟ್ಟದ ವಿಶೇಷ ತನಿಖಾ ತಂಡಗಳ ರಚನೆಯನ್ನು ಪ್ರಕಟಿಸಿದ ಮುಫ್ತಿ, ಇಂತಹ ತಂಡವೊಂದು ಎಟಿಎಂ ಕಾವಲುಗಾರ ರಿಯಾಝ್ ಅಹ್ಮದ್ ಶಾ ಮತ್ತು ಕಾಲೇಜು ಉಪನ್ಯಾಸಕ ಶಬೀರ್ ಅಹ್ಮದ್ ಮಾಂಗೂ ಅವರ ಹತ್ಯೆಗಳ ಕುರಿತು ತನಿಖೆ ನಡೆಸಲಿದೆ ಎಂದು ತಿಳಿಸಿದರು.
ಪೆಲೆಟ್‌ಗಳಿಂದ ಛಿದ್ರಗೊಂಡಿದ್ದ ಶಾ ಶವ ಹಳೆಯ ಶ್ರೀನಗರದಲ್ಲಿ ಪತ್ತೆಯಾಗಿದ್ದರೆ, ಪುಲ್ವಾಮಾ ಜಿಲ್ಲೆಯಲ್ಲಿ ಸೇನೆಯ ದಾಳಿ ತಂಡವೊಂದು ಮಾಂಗೂ ಅವರನ್ನು ಥಳಿಸಿ ಕೊಂದಿತ್ತೆನ್ನಲಾಗಿದೆ.





