ಮಾಹಿತಿಯಿಲ್ಲ ಎಂದ ಪಿಎಂಒ
ನೋಟು ನಿಷೇಧ; ಪ್ರಧಾನಿ ಸಮಾಲೋಚನೆ
ಹೊಸದಿಲ್ಲಿ, ಜ.9: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಉನ್ನತ ವೌಲ್ಯದ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರವನ್ನು ಘೋಷಿಸುವ ಮೊದಲು ಅವರು ಯಾವ ಅಧಿಕಾರಿಗಳ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲವೆಂದು ಪ್ರಧಾನಿ ಕಾರ್ಯಾಲಯದ ಕಚೇರಿ (ಪಿಎಂಒ) ಹೇಳಿದೆ.
500 ಹಾಗೂ 1 ಸಾವಿರ ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರವನ್ನು ಪ್ರಧಾನಿ ಪ್ರಕಟಿಸುವ ಮೊದಲು ಅವರು ಮುಖ್ಯ ಆರ್ಥಿಕ ಸಲಹೆಗಾರ ಹಾಗೂ ಕೇಂದ್ರ ವಿತ್ತ ಸಚಿವರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದರೇ ಎಂಬ ಪ್ರಶ್ನೆಗೂ ಉತ್ತರಿಸಲು ಪ್ರಧಾನಿ ಕಾರ್ಯಾಲಯ ನಿರಾಕರಿಸಿದೆ. ಈ ಪ್ರಶ್ನೆಯು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯ ವ್ಯಾಪ್ತಿಗೆ ಬರುವುದಿಲ್ಲವೆಂದು ಅದು ಸಮಜಾಯಿಷಿಯನ್ನು ನೀಡಿದೆ.
ನೋಟು ನಿಷೇಧಕ್ಕೆ ಸಂಬಂಧಿಸಿ ಪ್ರಧಾನಿಯವರು ಸಮಾಲೋಚನೆ ನಡೆಸಿದ ಅಧಿಕಾರಿಗಳ ಹೆಸರುಗಳನ್ನು ಬಹಿರಂಗಪಡಿಸುವಂತೆ ಕೋರಿ ಸಲ್ಲಿಸಲಾದ ಆರ್‌ಟಿಐ ಅರ್ಜಿಗೆ ಪ್ರಧಾನಿ ಕಾರ್ಯಾಲಯವು, ‘‘ಈ ಕುರಿತ ಮಾಹಿತಿಯ ದಾಖಲೆಗಳು ಕಚೇರಿಯಲ್ಲಿ ಲಭ್ಯವಿಲ್ಲ’’ ಎಂದು ಹೇಳಿದೆ.
ನಗದು ಅಮಾನ್ಯತೆಯನ್ನು ಘೋಷಿಸುವ ಮೊದಲು ಈ ಸಂಬಂಧ ಯಾವುದೇ ಸಭೆಗಳನ್ನು ನಡೆದಿದ್ದವೇ ಎಂದು ಕೂಡಾ ಆರ್‌ಟಿಐ ಅರ್ಜಿದಾರರು ಪ್ರಶ್ನಿಸಿದ್ದರು. ನೂತನ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸುವುದರಿಂದ ದೇಶಾದ್ಯಂತ ಎಟಿಎಂಗಳ ಕಾರ್ಯನಿರ್ವಹಣೆಯನ್ನು ಮರುರೂಪಿಸಬೇಕೆಂಬುದನ್ನು ಸರಕಾರವು ಗಣನೆಗೆ ತೆಗೆದುಕೊಂಡಿತ್ತೇ ಎಂಬುದನ್ನು ಕೂಡಾ ಅವರು ತಿಳಿಯಬಯಸಿದ್ದರು. ಇದರ ಜೊತೆಗೆ ನಗದು ಅಮಾನ್ಯತೆಯ ನಿರ್ಧಾರವನ್ನು ಯಾವುದೇ ಅಧಿಕಾರಿ ಅಥವಾ ಸಚಿವರು ವಿರೋಧಿಸಿದ್ದರೇ ಎಂಬ ಬಗ್ಗೆ ಮಾಹಿತಿ ನೀಡುವಂತೆಯೂ ಅವರು ಕೇಳಿದ್ದರು. ರದ್ದುಗೊಂಡಿರುವ ನೋಟುಗಳ ವೌಲ್ಯದ ಹೊಸ ನೋಟುಗಳನ್ನು ಬಿಡುಗಡೆಗೊಳಿಸಲು ಎಷ್ಟು ಸಮಯ ಬೇಕಾಗಬಹುದೆಂಬುದನ್ನು ತಿಳಿಸುವ ದಾಖಲೆಗಳೇನಾದರೂ ಇವೆಯೇ ಅರ್‌ಟಿಐ ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ ಈ ಯಾವ ಪ್ರಶ್ನೆಗಳಿಗೂ ಉತ್ತರ ನೀಡದಿರುವ ಪ್ರಧಾನಿ ಕಾರ್ಯಾಲಯವು, ಇವು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿದೆ.
ಈ ಮೊದಲು ಆರ್‌ಬಿಐ ಕೂಡಾ ನೋಟು ಅಮಾನ್ಯತೆಗೆ ಸಂಬಂಧಿಸಿ ಸರಕಾರ ಕೈಗೊಂಡ ನಿರ್ಧಾರದ ಬಗ್ಗೆ ಕೇಳಲಾದ ಪ್ರಶ್ನೆಗಳು ಆರ್‌ಟಿಐ ವ್ಯಾಪ್ತಿಯಡಿ ಬರುವುದಿಲ್ಲವೆಂದು ಹೇಳಿ ಉತ್ತರಿಸಲು ನಿರಾಕರಿಸಿತ್ತು.







