ಮಂಗಳೂರು-ಶಾರ್ಜಾ ಜೆಟ್ ವಿಮಾನ ಯಾನ ಶಾಶ್ವತ ಬಂದ್
ಪ್ರಯಾಣಿಕರ ಕೊರತೆಯೇ ಕಾರಣ

ಮಂಗಳೂರು, ಜ.10: ಜೆಟ್ ಏರ್‌ವೇಸ್ ಕಂಪೆನಿಯ ಮಂಗಳೂರು-ಶಾರ್ಜಾ ನೇರ ವಿಮಾನ ಯಾನವನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಾರ್ಜಾಕ್ಕೆ ನೇರ ವಿಮಾನ ಯಾನವನ್ನು ಜ.8ರಿಂದ ನಿಲ್ಲಿಸಲಾಗಿದೆ. ಆರಂಭದಲ್ಲಿ ತಾತ್ಕಾಲಿಕವಾಗಿ ಯಾನವನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗಿತ್ತಾದರೂ ಕೂಡ ಇದೀಗ ಶಾಶ್ವತವಾಗಿ ನಿಲ್ಲಿಸಲಾಗಿದೆ ಎಂದು ಜೆಟ್ ಏರ್‌ವೇಸ್ ಮೂಲಗಳು ತಿಳಿಸಿವೆ.
ಪ್ರಯಾಣಿಕರ ಕೊರತೆಯೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಕಳೆದ ಡಿಸೆಂಬರ್ ತಿಂಗಳಾಂತ್ಯಕ್ಕೆ ನಾವು ಈ ನಿರ್ಧಾರಕ್ಕೆ ಬಂದಿದ್ದೆವು. ಅದರಂತೆ ಎಲ್ಲ ಪ್ರಯಾಣಿಕರಿಗೆ, ಏಜೆನ್ಸಿಗಳಿಗೆ ಮಾಹಿತಿ ನೀಡಿದ್ದೇವೆ. ಬುಕ್ ಮಾಡಲಾದ ಎಲ್ಲ ಪ್ರಯಾಣಿಕರಿಗೂ ಬದಲಿ ವ್ಯವಸ್ಥೆ ಮಾಡಿದ್ದೇವೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆೆ. ಡಿಸೆಂಬರ್ ಬಳಿಕ ನಾವು ಯಾವುದೇ ಬುಕ್ಕಿಂಗ್ ತೆಗೆದುಕೊಂಡಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಜೆಟ್ ಏರ್‌ವೇಸ್‌ನ ಅಧಿಕಾರಿಯೊಬ್ಬರು ‘ಪತ್ರಿಕೆ’ಗೆ ತಿಳಿಸಿದ್ದಾರೆ.
ಈವರೆಗೆ ಜೆಟ್ ಏರ್‌ವೇಸ್ ಮಂಗಳೂರು-ಶಾರ್ಜಾ ನಡುವೆ ನೇರ ವಿಮಾನ ಯಾನ ಕಲ್ಪಿಸಿದ್ದರಿಂದ ಹಲವರಿಗೆ ಉಪಕಾರವಾಗುತ್ತಿತ್ತು. ಇದೀಗ ಶಾರ್ಜಾಕ್ಕೆ ತೆರಳುವವರು ಮುಂಬೈ ಮೂಲಕ ಪ್ರಯಾಣಿಸುವುದು ಅನಿವಾರ್ಯವಾಗಿದೆ.
...





