ರಣಹದ್ದುಗಳ ಸಂಖ್ಯೆಯಲ್ಲಿ ಇಳಿಕೆ :ಅಂತ್ಯ ಸಂಸ್ಕಾರದ ವಿಧಾನ ಬದಲಾಯಿಸುತ್ತಿರುವ ಪಾರ್ಸಿಗಳು
.jpg)
ಅಹ್ಮಾದಾಬಾದ್, ಜ.10: ರಣಹದ್ದುಗಳ ಸಂಖ್ಯೆಯಲ್ಲಿ ಇಳಿಕೆಯಿಂದಾಗಿ ಪಾರ್ಸಿ ಸಮುದಾಯ ತನ್ನ ಸಾಂಪ್ರದಾಯಿಕ ಅಂತ್ಯಕ್ರಿಯೆ ಪದ್ಧತಿಗಳನ್ನು ನೆರವೇರಿಸಲು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರದ ವಿಧಾನ ಬದಲಾಯಿಸಲು ಯತ್ನಿಸುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಗುಜರಾತ್ ರಾಜ್ಯದ ನವ್ಸರಿಯ ಪಾರ್ಸಿ ಸಮುದಾಯ ಇದೀಗ ತಮಗೆಂದೇ ಪ್ರತ್ಯೇಕ ರುದ್ರಭೂಮಿಯ ಬೇಡಿಕೆಯಿಟ್ಟಿದೆ.
ಇತ್ತೀಚೆಗೆ ನಡೆದ ನವ್ಸರಿ ಅಂಜುಮಾನ್ ಸಭೆಯಲ್ಲಿ ಭಾಗವಹಿಸಿದ ಹೆಚ್ಚಿನವರು ರುದ್ರಭೂಮಿಯ ವಿಚಾರದಲ್ಲಿ ಸಹಮತ ವ್ಯಕ್ತಪಡಿಸಿದ್ದಾರೆ. ಕೇವಲ ಆರು ಮಂದಿ ಮಾತ್ರ ಈ ಪ್ರಸ್ತಾಪವನ್ನು ವಿರೋಧಿಸಿದ್ದರು ಎಂದು ಅಂಜುಮಾನ್ ಕಾರ್ಯದರ್ಶಿ ಯಝ್ದಿ ಕಸದ್ ಹೇಳಿದ್ದಾರೆ.
ಅವರ ಪ್ರಕಾರ ಸಾಂಪ್ರದಾಯಿಕ ಪದ್ಧತಿಯಲ್ಲಿ ಅಂತ್ಯಕ್ರಿಯೆ ನಡೆಸಲು ಬಯಸುವವರು ಹಾಗೆ ಮಾಡಲು ಸ್ವತಂತ್ರರು ಹಾಗೂ ರುದ್ರಭೂಮಿಯಲ್ಲಿ ದಫನ ಮಾಡಲಿಚ್ಛಿಸುವವರೂ ಹಾಗೆ ಮಾಡಬಹುದೆಂದು ಹೇಳಿದ್ದಾರೆ. ಆದರೆ ಪಾರ್ಸಿಗಳಲ್ಲಿ ಇಂತಹ ಅಂತ್ಯ ಸಂಸ್ಕಾರ ವಿಧಾನ ಬದಲಾವಣೆ ಇದೇ ಮೊದಲಲ್ಲ. ಈ ಹಿಂದೆ ಬೆಂಗಳೂರು ಹಾಗೂ ಸೋಲಾಪುರದ ಪಾರ್ಸಿಗಳೂ ಸಾಂಪ್ರದಾಯಿಕ ಪದ್ಧತಿಯನ್ನು ಕೈಬಿಟ್ಟು ಕಳೇಬರಗಳನ್ನು ಹೂಳಲು ನಿರ್ಧರಿಸಿದ್ದುಂಟು.
ಸಾಂಪ್ರದಾಯಿಕವಾಗಿ ಪಾರ್ಸಿಗಳು ದೊಖ್ ಮೆನಶಿನಿ ಎಂಬ ಪದ್ಧತಿಯನ್ವಯ ಕಳೇಬರಗಳನ್ನು ಬಾವಿ ಅಥವಾ ‘ದಖ್ಮಾಸ್’ ಒಳಗೆ ಬಿಸಿಲಿನಲ್ಲಿರಿಸಿ ರಣಹದ್ದುಗಳಿಗೆ ಅವುಗಳನ್ನು ಆಹಾರವಾಗಿಸುತ್ತಾರೆ. ಆದರೆ ಇತ್ತೀಚೆಗೆ ರಣಹದ್ದುಗಳ ಸಂಖ್ಯೆ ಕಡಿಮೆಯಾಗಿರುವುದೇ ಸಮಸ್ಯೆಗೆ ಕಾರಣವಗಿದೆ.
ಕಳೆದ ವಾರ 160ಕ್ಕೂ ಅಧಿಕ ನವ್ಸರಿ ಪಾರ್ಸಿಗಳು ಮನವಿಯೊಂದಕ್ಕೆ ಸಹಿ ಹಾಕಿ ತಮಗೆ ದಫನ ಭೂಮಿ ಅಥವಾ ‘‘ಆರಾಮ್ ಘ’ ದ ಅಗತ್ಯವಿದೆ ಎಂದು ಹೇಳಿದ್ದರು.
ಆದರೆ ಈ ಬೆಳವಣಿಗೆ ಸಮುದಾಯದ ಕೆಲ ನಾಯಕರಿಗೆ ಸರಿಕಂಡಿಲ್ಲ.







