ಮಂಗಳೂರು ವಿವಿ: ದಕ್ಷಿಣ ವಲಯ ಅಂತರ್ ವಿವಿ ಕೊಕ್ಕೊ ಟೂರ್ನಿ ಉದ್ಘಾಟನೆ

ಕೊಣಾಜೆ, ಜ.10 : ಕ್ರೀಡೆಯು ನಮ್ಮಲ್ಲಿ ದೈಹಿಕ ದೃಢತೆಯನ್ನು ವೃದ್ಧಿಸುತ್ತದೆ . ಜೊತೆಗೆ ಇದರಲ್ಲಿ ನಾವು ಸಕ್ರಿಯವಾಗಿ ತೊಡಗಿಸಿಕೊಂಡರೆ ಆರೋಗ್ಯಕರ ಜೀವನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ನಾವು ಕಲಿಯುವಂತಹದ್ದು ಬಹಳಷ್ಟು ಇದೆ ಎಂದು ಕರ್ನಾಟಕ ಸರಕಾರದ ಯುವಜನ, ಕ್ರೀಡಾ ಮತ್ತು ಮೀನುಗಾರಿಕೆ ಇಲಾಖೆ ಸಚಿವ ಪ್ರಮೋದ್ ಮದ್ವರಾಜ್ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಮತ್ತು ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ ಇದರ ಆಶ್ರಯದಲ್ಲಿ ಮಂಗಳೂರು ವಿವಿಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ದಕ್ಷಿಣ ವಲಯ ಅಂತರ್ ವಿವಿ ಪುರುಷರ ವಿಭಾಗದ ಕೊಕ್ಕೊ ಪಂದ್ಯಾಟದ ಉದ್ಘಾಟನೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಇಂದು ಎಷ್ಟೋ ವಿಶ್ವವಿದ್ಯಾನಿಲಯಗಳು ಕ್ರೀಡಾ ಕ್ಷೇತ್ರಕ್ಕೆ ಬಹಳಷ್ಟು ಅವಕಾಶಗಳಿದ್ದರೂ ಕೇವಲ ಶಿಕ್ಷಣ ಕ್ಷೇತ್ರದತ್ತ ಹೆಚ್ಚು ಒಲವು ತೋರಿ ಕ್ರೀಡೆಯನ್ನು ನಿರ್ಲಕ್ಷಿಸುತ್ತಿವೆ. ಇದು ಉತ್ತಮ ಬೆಳವಣಿಗೆಯಲ್ಲ. ಇದರಿಂದ ಎಷ್ಟೋ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಆದರೆ ಮಂಗಳೂರು ವಿವಿ ಕಳೆದ ಹಲವಾರು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಯೊಂದಿಗೆ ಕ್ರೀಡಾ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡುವುದರೊಂದಿಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಅಪೂರ್ವ ಸಾಧನೆ ಮಾಡುತ್ತಿದೆ ಎಂದು ಹೇಳಿದರು.
ಸರಕಾರದಿಂದ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಸರಕಾರದ ಅನುದಾನವೂ ಬಹಳಷ್ಟು ಕಡಿಮೆಯಿದೆ. ಒಂದು ಈಗಿರುವ ಅನುದಾನಕ್ಕಿಂತ ದುಪ್ಪಟ್ಟು ನೀಡಿದರೆ ಆರೋಗ್ಯ ಇಲಾಖೆಗೆ ನಾವು ಹೆಚ್ಚು ಖರ್ಚು ಮಾಡಬೇಕಾದ ಅಗತ್ಯತೆ ಇಲ್ಲ. ಯಾಕೆಂದರೆ ಕ್ರೀಡೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡರೆ ಎಲ್ಲರೂ ಆರೋಗ್ಯವಂತರಾಗಿರಲು ಸಾಧ್ಯ. ಕ್ರೀಡಾ ಇಲಾಖೆಗೆ ಮುಂದಿನ ದಿನಗಳಲ್ಲಿ ಬಜೆಟ್‌ನ ಹೆಚ್ಚಳ ಮಾತ್ರವಲ್ಲದೆ ಒಂದು ಸಮಗ್ರವಾದ ಕ್ರೀಡಾ ನೀತಿಯನ್ನು ರಾಜ್ಯದಲ್ಲಿ ರೂಪಿಸಲು ಚಿಂತನೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಿದ್ದೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಮಂಗಳೂರು ವಿವಿಯ ಕ್ರೀಡಾ ನೀತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕ್ರೀಡೆಗೆ ಸಂಬಧಿಸಿದ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ಇದರಿಂದಾಗಿ ಇಂದು ಮಂಗಳೂರು ವಿವಿ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದೆ. ಮಾತ್ರವಲ್ಲದೆ ಕ್ರೀಡೆಯಲ್ಲಿ ತೊಡಗಿಸಿಕೊಂಡ ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಜರಾತಿ, ಕೃಪಾಂಕ ಜೊತೆಗೆ ನಗದು ಬಹುಮಾನ ನೀಡಿ ಗೌರವಿಸುವ ಕೆಲಸವನ್ನು ವಿವಿ ಪ್ರತೀ ವರ್ಷ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಕ್ಕೊ ಕ್ರೀಡೆಯಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಎಸ್.ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಅಲ್ಲದೆ ತಿರುಪತಿಯಲ್ಲಿ ಸಿ.ವಿ.ರಾಮನ್ ಪ್ರಶಸ್ತಿಯನ್ನು ಪಡೆದುಕೊಂಡ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ.ಖಾನ್ ಸ್ವಾಗತಿಸಿದರು.
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಅವರು ವಂದಿಸಿದರು.
ಮಂಗಳೂರು ವಿವಿ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಿಯಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಆಕರ್ಷಕ ಪಥ ಸಂಚಲನ ನಡೆಯಿತು.
ಕೊಕ್ಕೋ ಕ್ರೀಡಾ ಕೂಟದಲ್ಲಿ ತಮಿಳು ನಾಡು, ಕರ್ನಾಟಕ, ಕೇರಳ, ಆಂದ್ರಪ್ರದೇಶ, ಪಾಂಡಿಚೇರಿ ರಾಜ್ಯಗಳ ವಿವಿ ವಿಶ್ವವಿದ್ಯಾನಿಲಯಗಳ ಸುಮಾರು 53 ತಂಡಗಳು ಭಾಗವಹಿಸಿವೆ.







