ಪೊಲೀಸ್ ವೇಷದಲ್ಲಿ ಬಂದು ಕಾರು ನಿಲ್ಲಿಸಿ 15ಲಕ್ಷ ರೂ. ದೋಚಿದ ದುಷ್ಕರ್ಮಿಗಳು!

ಕಾಞಂಗಾಡ್, ಜ. 10: ಪೊಲೀಸ್ ವೇಷದಲ್ಲಿ ಏಳುಮಂದಿಯ ತಂಡ ಕಾರು ತಡೆದು ನಿಲ್ಲಿಸಿ ಮಲಪ್ಪುರಂನ ಮೂವರನ್ನು ಕಟ್ಟಿಹಾಕಿ 15 ಲಕ್ಷ ರೂಪಾಯಿ ದೋಚಿದ ಘಟನೆ ಕೇರಳದಲ್ಲಿ ನಡೆದಿದೆ. ದರೋಡೆಕೋರರು ಬಲವಂತದಿಂದ ವಶಪಡಿಸಿಕೊಂಡ ಕಾರನ್ನು ಪುಂಚಪ್ಪಾಡ ಎಂಬಲ್ಲಿ ತೊರೆದು ಪರಾರಿಯಾಗಿದ್ದಾರೆ. ಮುಂಡೂರ್ -ಚೆರುಪ್ಪುಳಶ್ಶೇರಿ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡಿದಿದೆ. ರವಿವಾರ ಮಲಪ್ಪುರಂ ವೇಂಙರದ ಇಸ್ಹಾಕ್, ಅಶ್ರಫ್, ಇಸ್ಮಾಯೀಲ್ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದರೋಡೆಗೊಳಗಾಗಿದ್ದಾರೆ.
ಟೊಯೊಟೊ ಕಾರಿನ ಬ್ರೇಕ್‌ಲೈಟ್‌ಗೆ ಪೊಲೀಸ್ ಎಂದು ಸ್ಟಿಕ್ಕರ್ ಅಂಟಿಸಿ ದರೋಡೆಕೋರರು ಬಂದಿದ್ದರು. ಒಟ್ಟು ಏಳು ಮಂದಿ ದರೋಡೆ ಕೋರರಲ್ಲಿ ಮೂರು ಮಂದಿ ಪೊಲೀಸ್ ಪೊಷಾಕು ಧರಿಸಿದ್ದರು. ಕಾರನ್ನು ತಡೆದು ನಿಲ್ಲಿಸಿದ ದರೋಡೆಕೋರರು ವಾಹನ ತಪಾಸಣೆಗೆ ಠಾಣೆಗೆ ಎಂದು ಕರೆದುಕೊಂಡು ಹೋಗಿದ್ದು ದಾರಿ ಮಧ್ಯೆ ಇಸ್‌ಹಾಕ್ ಕೈಯಲ್ಲಿದ್ದ ಹಣವನ್ನು ಕಿತ್ತು ಕೊಂಡಿದ್ದಾರೆ. ನಂತರ ಮೂವರನ್ನೂ ಹೊರಗೆ ದೂಡಿ ಹಾಕಿದ್ದಾರೆ.
ದರೋಡೆಕೋರರು ಬಂದಿದ್ದ ಟೊಯೊಟೊ ಕಾರಿನ ತಿರುವನಂತಪುರಂ ರಿಜಿಸ್ಟ್ರೇಶನ್ ನಕಲಿ ಎಂದು ತನಿಖೆಯಿಂದ ತಿಳಿದು ಬಂದಿದೆ. ಪೊಲೀಸರು ಕೇಸು ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆಂದು ವರದಿಯಾಗಿದೆ.





