ಭಟ್ಕಳ ಕಸಾಪದ ಕಾವ್ಯೋತ್ಸವ ಚಿರಕಾಲ ನೆನಪಿಡುವಂಥಹದ್ದು : ನಾಡೋಜ ಕೆ.ಎಸ್.ನಿಸಾರ ಅಹಮದ್

ಭಟ್ಕಳ, ಜ.10 : ಭಟ್ಕಳ ತಾಲೂಕು ಕಸಾಪ ಆಯೋಜಿಸಿದ ಕಾವ್ಯೋತ್ಸವ ತನ್ನ ಬದುಕಲ್ಲಿ ಚಿರಕಾಲ ನೆನಪಿಡುವಂತಹ ಅವಿಸ್ಮರಣೀಯ ಕಾವ್ಯೋತ್ಸವ ಎಂದು ನಾಡಿನ ಖ್ಯಾತ ಸಾಹಿತಿ, ನಿತ್ಯೋತ್ಸವ ಕವಿಯಾದ ಕೆ.ಎಸ್.ನಿಸಾರ್ ಅಹಮದ್ ಭಾವಪೂರ್ಣರಾಗಿ ನುಡಿದರು.
ಅವರು ಭಟ್ಕಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಭಟ್ಕಳ ಕಸಾಪದ ವತಿಯಿಂದ ಮುರ್ಡೇಶ್ವರದ ಆರ್.ಎನ್.ಎಸ್. ರೆಸಿಡೆನ್ಸಿಯಲ್ಲಿ ಹಮ್ಮಿಕೊಂಡ ನಿತ್ಯೋತ್ಸವ ಕವಿಯೊಂದಿಗೆ ಕಾವ್ಯೋತ್ಸವ ಕವಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಭಟ್ಕಳ ತಾಲೂಕು ಸಾಹಿತ್ಯ ಪರಿಷತ್ ತನ್ನನ್ನು ಇಷ್ಟು ಹೃದಯಸ್ಪರ್ಶಿಯಾಗಿ ಕಾವ್ಯೋತ್ಸವದ ಮೂಲಕ ಬರಮಾಡಿಕೊಳ್ಳಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ನಿಮ್ಮ ಅಭಿಮಾನದಿಂದ ಮನದುಂಬಿಬಂದಿದೆ . ಒಬ್ಬ ಸಾಹಿತಿಗೆ ಅವನು ರಚಿಸಿದ ಗೀತೆಯನ್ನು ಒಂದಿನಿತೂ ಸಾಹಿತ್ಯ ಲೋಪವಿಲ್ಲದೇ ಸುಶ್ರಾವ್ಯವಾಗಿ ಪ್ರಸ್ತುತ ಪಡಿಸುವುದು ಕವನ ರಚಿಸಿದ ಕವಿಯೊಬ್ಬನಿಗೆ ಸಾರ್ಥಕತೆಯನ್ನು ಅನುಭವಿಸುವಂತೆ ಮಾಡುತ್ತದೆ ಎಂದು ನಿತ್ಯೋತ್ಸವ ಕವನವನ್ನು ಹಾಡಿದ ಗಂಗಾಧರ ನಾಯ್ಕ ಅವರನ್ನು ಮನದುಂಬಿ ಪ್ರಶಂಸಿಸಿದರಲ್ಲದೇ ತಮ್ಮ ಕುರಿತಾಗಿಯೇ ರಚಿಸಿದ ಕವನಗಳನ್ನು ಪ್ರಸ್ತುತ ಪಡಿಸಿದ ಎಲ್ಲ ಕವಿಗಳಿಗೆ ಪ್ರೀತಿಯಿಂದ ಶುಭ ಹಾರೈಸಿದರು .
ಕಾರ್ಯಕ್ರಮದಲ್ಲಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಕೆ.ಎಸ್.ನಿಸಾರ್ ಅಹಮದ್ ರ ನಿತ್ಯೋತ್ಸವ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿಯವರು ರಚಿಸಿದ ಗಂಗಾಧರ ನಾಯ್ಕ ಹಾಡಿದ ಶರಾವತಿ ಗೀತೆಯನ್ನು ನಿಸಾರ್ ಅಹಮದ್ ಅವರಿಗೆ ಕೇಳಿಸಲಾಯಿತು.
ಕವಿಗಳಾದ ಮಾನಾಸುತ ಮುರ್ಡೇಶ್ವರ, ಶ್ರೀಧರ ಶೇಟ್ ಶಿರಾಲಿ, ಎಮ್.ಪಿ.ಬಂಢಾರಿ, ಉಮೇಶ ಮುಂಡಳ್ಳಿ ತಮ್ಮ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರೆ , ಹೆಮ್ಮಾಡಿಯ ಕಸಾಪದ ಚಂದ್ರ ಹೆಮ್ಮಾಡಿ ನಿಸಾರರ ಗೀತೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ , ಬಾಲ್ಯದಿಂದಲೂ ಹಿರಿಯ ಸಾಹಿತಿಗಳಾದ ನಿಸಾರರ ಗೀತೆಗಳನ್ನು ಓದುತ್ತ ಪ್ರೇರಿತರಾದ ನಮಗೆ ಇಂದು ಅವರೊಂದಿಗೇ ಕಾವ್ಯೋತ್ಸವ ಮಾಡುವ ಅವಕಾಶ ದೊರಕಿದ್ದು ತಮ್ಮ ಸೌಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಸಂತೋಷ ಆಚಾರ್ಯ, ಹೊನ್ನಾವರ ಕಸಾಪ ಗೌರವ ಕಾರ್ಯದರ್ಶಿ ಭವಾನಿಸಂಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.







