ಬಜೆಟ್‌ನಲ್ಲಿ ನೂತನ ಕ್ರೀಡಾನೀತಿ ಪ್ರಕಟ: ಸಚಿವ ಪ್ರಮೋದ್

ಉಡುಪಿ, ಜ.10: ರಾಜ್ಯ ಸರಕಾರದ ಈ ಬಾರಿಯ ಬಜೆಟ್‌ನಲ್ಲಿ ನೂತನ ಕ್ರೀಡಾ ನೀತಿಯನ್ನು ಪ್ರಕಟಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ ಸರಕಾರದ ಕ್ರೀಡಾ ಮಂತ್ರಾಲಯ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಜ್ಜರಕಾಡು ಈಜು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ರಾಜ್ಯಮಟ್ಟದ ಖೇಲೋ ಇಂಡಿಯಾ ಈಜು ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕ್ರೀಡಾ ನೀತಿ ರೂಪಿಸುವ ಕುರಿತಂತೆ ಈಗಾಗಲೇ ರಾಜ್ಯದ ಐದು ಕಡೆಗಳಲ್ಲಿ ಅಭಿಪ್ರಾಯ ಸಂಗ್ರಹ ಸಭೆಯನ್ನು ನಡೆಸಲಾಗಿದ್ದು, ಈ ಸಲಹೆಗಳನ್ನು ಕ್ರೋಢೀಕರಿಸಿ ಕರಡು ಕ್ರೀಡಾ ನೀತಿಯನ್ನು ಈಗಾಗಲೇ ರಚಿಸಲಾಗಿದೆ. ಈ ಕರಡು ಪ್ರತಿಯನ್ನು ವಿವಿಧ ಕ್ಷೇತ್ರಗಳ ಕ್ರೀಡಾತಜ್ಞರಿಂದ ಮತ್ತೊಮ್ಮೆ ಪರಿಶೀಲಿಸಿ 2017-18ರ ರಾಜ್ಯ ಬಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಖೋಲೋ ಇಂಡಿಯಾ ಕ್ರೀಡಾಕೂಟಕ್ಕೆ ಕೇಂದ್ರ ಸರಕಾರ ಕೇವಲ ಮೂರು ಕೋಟಿ ಅನುದಾನ ನೀಡುತ್ತಿದ್ದು, ಇದರಿಂದ ಕ್ರೀಡಾಕೂಟ ನಡೆಸಲು ಸಾಧ್ಯ ವಾಗದೆ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಕೇಂದ್ರ ಸಚಿವರೊಂದಿಗೆ ಮಾತನಾಡಿ 10ಕೋಟಿ ರೂ. ಒದಗಿಸುವಂತೆ ಬೇಡಿಕೆ ಮುಂದಿಡಲಾಗಿತ್ತು. ಆದರೆ ಅವರು ಅದಕ್ಕೆ ನಿರಾಕರಿಸಿದ್ದರು. ಆದುದರಿಂದ ಮೂರು ಕೋಟಿ ರೂ. ಅನು ದಾನದಲ್ಲಿ ಕೆಲವು ಸ್ಪರ್ಧೆಗಳನ್ನು ಕಡಿತಗೊಳಿಸಿ ಕ್ರೀಡಾಕೂಟವನ್ನು ಮತ್ತೆ ಆರಂಭಿಸಲಾಗಿದೆ ಎಂದರು.
ರಾಜ್ಯದ 1000 ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಕಾರ್ಪೊರೇಟ್ ಕಂಪೆನಿಗಳು ಅವರನ್ನು ದತ್ತು ಸ್ವೀಕರಿಸಿ ವಿಶೇಷ ತರಬೇತಿ ಯನ್ನು ನೀಡಲಾಗುವುದು. ಒಲಂಪಿಕ್ಸ್‌ನಲ್ಲಿ ಚಿನ್ನ, ಬೆಳ್ಳಿ, ಕಂಚು ಪದಕ ವಿಜೇತರಿಗೆ 5, 3, 2ಕೋಟಿ ರೂ. ನಗದು ಬಹುಮಾನವನ್ನು ರಾಜ್ಯ ಸರಕಾರ ಘೋಷಿಸಿದೆ. ರಾಜ್ಯದ ಪ್ರಮುಖ ಕ್ರೀಡಾ ಶಕ್ತಿ ಈಜು ಸ್ಪರ್ಧಿಗಳು ಈ ವಿಭಾಗದಲ್ಲಿ ಹೆಚ್ಚಿನ ಸಾಧನೆ ತೋರಿ, ಮುಂದಿನ ಒಲಂಪಿಕ್ಸ್‌ನ ಈಜು ಸ್ಪರ್ಧೆಯಲ್ಲಿ ರಾಜ್ಯದ ಕ್ರೀಡಾಪಟುಗಳು ಪದಕ ಗೆಲ್ಲುವಂತಾಗಲಿ ಎಂದು ಅವರು ಹಾರೈಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಈಜು ಸ್ಪರ್ಧೆಯ ವೀಕ್ಷಕ ವಿಶ್ವಾಸ ಪವಾರ್ ಉಪಸ್ಥಿತರಿದ್ದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ 15 ಜಿಲ್ಲೆಗಳಿಂದ 14ರಿಂದ 17ರ ವಯೋಮಾನದ ಈಜು ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 50ಮೀ. ವಿಭಾಗದಲ್ಲಿ ವಿವಿಧ ಈಜು ಸ್ಪರ್ಧೆಗಳು ನಡೆದವು.







